ದೇಶ

ಹಲವು ಸವಾಲಿನ ಸಂದರ್ಭಗಳಲ್ಲಿ ಕಾರ್ಯಾಚರಣೆ ಮುನ್ನಡೆಸಿದ್ದ ನೌಕಾದಳದ ಉಪ ಅಡ್ಮಿರಲ್ ಎಂ.ಎಸ್. ಪವಾರ್ ನಿವೃತ್ತಿ

Srinivas Rao BV

ನವದೆಹಲಿ: ಹಲವು ನಿರ್ಣಾಯಕ, ಸವಾಲಿನ ಸಂದರ್ಭಗಳಲ್ಲಿ ಕಾರ್ಯಾಚರಣೆಯನ್ನು ಮುನ್ನಡೆಸಿದ್ದ ಭಾರತೀಯ ನೌಕಾದಳದ ಉಪ ಅಡ್ಮಿರಲ್ ಎಂ.ಎಸ್. ಪವಾರ್ ನಿವೃತ್ತರಾಗಿದ್ದಾರೆ. 

ಸೋಮವಾರದಂದು ಉಪ ಅಡ್ಮಿರಲ್ ಪವಾರ್ ನಿವೃತ್ತರಾಗಿದ್ದು, ಕೋವಿಡ್-19, ಭಾರತ-ಚೀನಾ ಗಡಿ ಸಂಘರ್ಷದ ವೇಳೆ ಭಾರತೀಯ ನೌಕಾಪಡೆಯ ಯುದ್ಧನೌಕೆಗಳ ನಿಯೋಜನೆಯ ಅನುಷ್ಠಾನಗಳಂತಹ ಸವಾಲಿನ ಕಾರ್ಯಾಚರಣೆಗಳನ್ನು ಮುನ್ನಡೆಸಿದ ಕೀರ್ತಿಯನ್ನು ಹೊಂದಿದ್ದಾರೆ. 

ಪುಣೆಯ ಖಾಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 60 ನೇ ಕೋರ್ಸ್ ಹಾಗೂ ಕೊರುಕೊಂಡಾದ ಸೈನಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ  ಉಪ ಅಡ್ಮಿರಲ್ ಪವಾರ್ ಅವರು 2019 ರ ಜನವರಿ.30 ರಂದು ನೌಕಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಅಧಿಕಾರವನ್ನು ಸ್ವೀಕರಿಸಿದ್ದರು. 

1982 ರ ಜುಲೈ.1 ರಂದು ನೌಕಾಪಡೆಗೆ ಸೇರ್ಪಡೆಯಾಗಿದ್ದ ಪವಾರ್ ಅವರು ಪ್ರಾರಂಭಿಕ ತರಬೇತಿ ಹಂತದಲ್ಲಿ ಅತ್ಯುತ್ತಮ ಸರ್ವಾಂಗೀಣ ಕೆಡೆಟ್ ಪ್ರಶಸ್ತಿಗೆ ಭಾಜನರಾಗಿದ್ದರು ಹಾಗೂ ವಾರ್ಷಿಕ ಸಬ್ ಲೆಫ್ಟಿನೆಂಟ್ ತಾಂತ್ರಿಕ ಕೋರ್ಸ್‌ಗಳಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ನಂತರದ ದಿನಗಳಲ್ಲಿ ಪ್ರತಿಷ್ಠಿತ ಹಾಗೂ ಅತ್ಯಂತ ಸ್ಪರ್ಧಾತ್ಮಕ ಕೋರ್ಸ್ ಆಗಿದ್ದ ನ್ಯಾವಿಗೇಶನ್ ಹಾಗೂ ಡೈರೆಕ್ಷನ್ ನಲ್ಲಿ ಪರಿಣತಿ ಸಾಧಿಸಿ ಅಗ್ರಸ್ಥಾನ ಪಡೆದು ತೇರ್ಗಡೆ ಹೊಂದಿದ್ದರು.

ಉಪ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಎಂ.ಎಸ್ ಪವಾರ್, ಕೋವಿಡ್-19 ಸಾಂಕ್ರಾಮಿಕ ಹಾಗೂ ಗಲ್ವಾನ್ ಘರ್ಷಣೆಗೆ ನೌಕಾ ಪಡೆಯನ್ನು ಯುದ್ಧ ಸನ್ನದ್ಧವಾಗಿ ಸಜ್ಜುಗೊಳಿಸಿದ್ದರು. ಇದಿಷ್ಟೇ ಅಲ್ಲದೇ ಎರಡು ಪ್ರಮುಖ ಮಾನವ ರಕ್ಷಣೆ ಕಾರ್ಯಾಚರಣೆಗಳಾದ ಆಪರೇಷನ್ ಸಮುದ್ರ ಸೇತು, ಮಿಷನ್ ಸಾಗರ್ ಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. 

ಆಪರೇಷನ್ ಸಮುದ್ರ ಸೇತು ಕಾರ್ಯಾಚರಣೆಯಲ್ಲಿ ನಾಲ್ಕು ಯುದ್ಧನೌಕೆಗಳ ಮೂಲಕ ಅತ್ಯಂತ ಸಂಕಷ್ಟದಲ್ಲಿ ಸಿಲುಕಿದ್ದ 4,000 ಮಂದಿ ಭಾರತೀಯರನ್ನು ರಕ್ಷಣೆ ಮಾಡಲಾಗಿತ್ತು. ಮಿಷನ್ ಸಾಗರ್ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ, ಕೋವಿಡ್-19 ಎದುರಿಸಲು ಅಗತ್ಯವಿರುವ ಹಾಗೂ ಆಹಾರ ಪದಾರ್ಥಗಳನ್ನು ಹಿಂದೂ ಮಹಾಸಾಗರದಾದ್ಯಂತ ಇರುವ ಪ್ರದೇಶಗಳ ರಾಷ್ಟ್ರಗಳಿಗೆ ತಲುಪಿಸಲು ತನ್ನ ನೌಕೆಗಳನ್ನು ನಿಯೋಜಿಸಿತ್ತು. 

ಇನ್ನು ಕೋವಿಡ್-19 ನ ಎರಡನೇ ಅಲೆಯ ಸಂದರ್ಭದ ಸವಾಲಿನಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದ ಎಂಎಸ್ ಪವಾರ್ ನೇತೃತ್ವದ ತಂಡ ಆಕ್ಸಿಜನ್ ಗಳನ್ನು ಪರ್ಷಿಯನ್ ಗಲ್ಫ್ ರಾಷ್ಟ್ರಗಳಿಂದ ತರುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿಸಿತ್ತು. 

ಆಕ್ಸಿಜನ್ ತಲುಪಿಸುವುದಕ್ಕಾಗಿ ಏಪ್ರಿಲ್ ತಿಂಗಳಾಂತ್ಯದಲ್ಲಿ ಭಾರತೀಯ ನೌಕಾಪಡೆ ಆಪರೇಷನ್ ಸಮುದ್ರ ಸೇತು-II ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು ಈ ಮೂಲಕ ಈ ವರೆಗೂ ನೌಕೆಗಳಿಂದ 910 ಎಂ.ಟಿ ದ್ರುವೀಕೃತ ವೈದ್ಯಕೀಯ ಆಕ್ಸಿಜನ್ ಹಾಗೂ 10,000 ಕ್ಕೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ಗಳನ್ನು ತರಲಾಗಿದೆ. 

SCROLL FOR NEXT