ದೇಶ

ಕೊರೋನಿಲ್ ಕಿಟ್ ಬಗ್ಗೆ ತಪ್ಪು ಮಾಹಿತಿ ಕೇಸು: ಯೋಗ ಗುರು ಬಾಬಾ ರಾಮ್ ದೇವ್ ಗೆ ದೆಹಲಿ ಹೈಕೋರ್ಟ್ ಸಮನ್ಸ್ 

Sumana Upadhyaya

ನವದೆಹಲಿ: ದೆಹಲಿ ವೈದ್ಯಕೀಯ ಸಂಘ(ಡಿಎಂಎ) ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಸಮನ್ಸ್ ಜಾರಿ ಮಾಡಿದೆ.

ದೇಶದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ಮಧ್ಯೆ ಪತಂಜಲಿಯ ಕೊರೋನಿಲ್ ಟ್ಯಾಬ್ಲೆಟ್ ಬಗ್ಗೆ ಬಾಬಾ ರಾಮ್ ದೇವ್ ಅವರು ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಜನರಿಗೆ ಹಬ್ಬಿಸುತ್ತಿದ್ದು, ಅದಕ್ಕೆ ತಡೆ ನೀಡಬೇಕೆಂದು ಕೋರಿ ದೆಹಲಿ ವೈದ್ಯಕೀಯ ಸಂಘ ಹೈಕೋರ್ಟ್ ನಲ್ಲಿ ದಾವೆ ಹೂಡಿತ್ತು.

ಸಾರ್ವಜನಿಕವಾಗಿ ಯೋಗ ಗುರು ರಾಮದೇವ್ ಅವರು ನೀಡುತ್ತಿರುವ ಹೇಳಿಕೆಗಳು ವಿಜ್ಞಾನ ಮತ್ತು ವೈದ್ಯಲೋಕದ ಮೇಲಿರುವ ಗೌರವಕ್ಕೆ ಧಕ್ಕೆಯನ್ನುಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ನಾಗರಿಕ ಹಕ್ಕುಗಳ ರಕ್ಷಣೆ ಕೋರಿ ಈ ಅರ್ಜಿಯನ್ನು ಹೂಡಲಾಗಿದೆ ಎಂದು ದೆಹಲಿ ವೈದ್ಯಕೀಯ ಸಂಘದ ಪರ ವಕೀಲ ಅಡ್ವೊಕೇಟ್ ರಾಜೀವ್ ದತ್ತ ಇಂದು ಕೋರ್ಟ್ ಮುಂದೆ ವಿವರಿಸಿದರು.

ಅಲೋಪಥಿ ಔಷಧಿ ಬಗ್ಗೆ ಈ ಮೊದಲು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಯೋಗ ಗುರು ಬಾಬಾ ರಾಮದೇವ್ ವಿರುದ್ಧ ದೂರು ದಾಖಲಿಸಿತ್ತು. ಐಎಂಎಯ ಪ್ರಧಾನ ಕಾರ್ಯದರ್ಶಿ ಜಯೇಶ್ ಲೆಲೆ ದೆಹಲಿಯ ಐಪಿ ಎಸ್ಟೇಟ್ ಪೊಲೀಸ್ ಸ್ಟೇಷನ್ ನಲ್ಲಿ ಸಲ್ಲಿಸಿದ್ದ 14 ಪುಟಗಳ ದೂರಿನಲ್ಲಿ, ರಾಮದೇವ್ ಅವರು ವೈದ್ಯಕೀಯ ವೃತ್ತಿಗೆ ಸಂಕಟ ಮತ್ತು ಅಪಖ್ಯಾತಿಯನ್ನು ಉಂಟುಮಾಡಿದ್ದಾರೆ, ತಮ್ಮ ಹೇಳಿಕೆಗಳ ಮೂಲಕ ವೈದ್ಯರನ್ನು ದೂಷಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

ಅಲೋಪಥಿ ಔಷಧಿಯಿಂದ ಕೊರೋನಾ ಹೋಗುವುದಿಲ್ಲ, ಬದಲಿಗೆ ಪತಂಜಲಿಯ ಕೊರೊನಿಲ್ ಮೂಲಕ ಗುಣಪಡಿಸಬಹುದು ಎಂದು ಜನರಿಗೆ ಹೇಳಿ ಅವರನ್ನು ನಂಬುವಂತೆ ಮಾಡಿ ಈ ಕೊರೋನಾ ಸಂಕಷ್ಟ ಸಮಯದಲ್ಲಿ ಲಾಭ ಮಾಡಿಕೊಳ್ಳಲು ನೋಡುತ್ತಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

SCROLL FOR NEXT