ದೇಶ

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಫೋಟೋದೊಂದಿಗೆ ಲಸಿಕೆ ಪ್ರಮಾಣ ಪತ್ರ ನೀಡಿಕೆ

Nagaraja AB

ಕೊಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೋದೊಂದಿಗೆ 18-44 ವರ್ಷದ ಗುಂಪಿನ ಜನರಿಗೆ ನೀಡುತ್ತಿರುವ ಕೋವಿಡ್-19 ಲಸಿಕೆ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದೆ.

ರಾಜ್ಯ ಸರ್ಕಾರ ತನ್ನ ಸ್ವಂತ ಸಂಪನ್ಮೂಲಗಳಿಂದ ಲಸಿಕೆ ತಯಾರಿಕಾ ಕಂಪನಿಗಳಿಂದ ನೇರವಾಗಿ ಖರೀದಿಸಿದಾಗಿನಿಂದಲೂ ಇದನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

ದೇಶದ ಇತರೆಡೆ ಇರುವಂತೆ 45 ವರ್ಷಕ್ಕೂ ಮೇಲ್ಪಟ್ಟ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಇರುವ ಲಸಿಕೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ಆದರೆ, 18-44 ವರ್ಷದೊಳಗಿನವರಿಗೆ ಮಮತಾ ಬ್ಯಾನರ್ಜಿ ಅವರ ಫೋಟೋವಿರುವ ಲಸಿಕಾ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ.

ಉತ್ಪಾದನಾಕಾರರಿಂದ ನೇರವಾಗಿ ಲಸಿಕೆ ಖರೀದಿಯನ್ನು ಸರ್ಕಾರ ಆರಂಭಿಸಿದ್ದು, ಜನರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿದೆ. ಇದರಿಂದಾಗಿ ಲಸಿಕೆ ಪ್ರಮಾಣ ಪತ್ರಗಳಲ್ಲಿ  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೋ ಬಳಸಲು ನಿರ್ಧರಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

18-44 ವರ್ಷದೊಳಗಿನ ಜನರಿಗೆ ಕೇಂದ್ರ ಸರ್ಕಾರ ಲಸಿಕೆ ನೀಡದಿದ್ದಾಗ ರಾಜ್ಯ ಸರ್ಕಾರ ಅದಕ್ಕಾಗಿ ವೆಚ್ಚ ಮಾಡಿದೆ. ತದನಂತರ ಮುಖ್ಯಮಂತ್ರಿ ಫೋಟೋವನ್ನು ಲಸಿಕೆ ಪ್ರಮಾಣ ಪತ್ರದಲ್ಲಿ ಬಳಸಲಾಗುತ್ತಿದೆ ಎಂದು ವಸತಿ ಸಚಿವ ಫಿರ್ಹಾದ್ ಹಕ್ಕಿಂ ಹೇಳಿದ್ದಾರೆ. ಆದರೆ, ಈ ನಡೆ ಕೋವಿನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರುವ ಲಸಿಕೆ ಪ್ರಮಾಣ ಪತ್ರಗಳನ್ನು ಪಡೆದ ಫಲಾನುಭವಿಗಳಲ್ಲಿ ಗೊಂದಲ ಮೂಡಿಸಿರುವುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

SCROLL FOR NEXT