ದೇಶ

'6 ತಿಂಗಳಿಂದ ನಿಷ್ಕ್ರಿಯ, ಅಪೂರ್ಣ ವಿವರದ ಖಾತೆಗಳು'; ‘ಬ್ಲೂ ಟಿಕ್‌’ ತೆಗೆದದ್ದಕ್ಕೆ ಕಾರಣ ನೀಡಿದ ಟ್ವಿಟರ್‌!

Srinivasamurthy VN

ನವದೆಹಲಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಖಾತೆಗಳ ಬ್ಲೂಟಿಕ್ ತೆಗೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಖ್ಯಾತ ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ಇದೀಗ ತನ್ನ ಕಾರ್ಯಕ್ಕೆ ಕಾರಣಗಳನ್ನು ನೀಡಿದೆ.

ಹೌದು..ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವು ಗಣ್ಯರ ಖಾತೆಗಳಿಗಿದ್ದ ದೃಢೀಕರಣದ ಮಾನ್ಯತೆ ಅಥವಾ ಬ್ಲೂ ಟಿಕ್‌ ಅನ್ನು ತೆಗೆದು ಹಾಕಿದ್ದಕ್ಕೆ ಟ್ವಿಟರ್‌ ಕಾರಣ ನೀಡಿದ್ದು, ಆರು ತಿಂಗಳವರೆಗೆ ಖಾತೆಯೂ ಅಪೂರ್ಣವಾಗಿಯೂ,  ನಿಷ್ಕ್ರಿಯವಾಗಿಯೂ ಉಳಿದಿದ್ದರೆ ಅಂಥಹ ಖಾತೆಗಳ ಬ್ಲೂ ಟಿಕ್‌ ಮತ್ತು ವೇರಿಫೈಡ್‌ ಮಾನ್ಯತೆ ತಾನಾಗಿಯೇ ಹೋಗಲಿದೆ. ಇದು ಸಂಸ್ಥೆಯ ನೀತಿಯೂ ಆಗಿದೆ ಎಂದು ಟ್ವಿಟರ್‌ ಹೇಳಿದೆ. 

ಖಾತೆ ನಿಷ್ಕ್ರಿಯತೆಯು ಖಾತೆಗೆ ಲಾಗಿನ್ ಆಗುವುದರ ಮೇಲೆ ನಿರ್ಧಾರವಾಗಲಿದೆ. ಖಾತೆಯನ್ನು ಸಕ್ರಿಯವಾಗಿಡಲು ಕನಿಷ್ಠ 6 ತಿಂಗಳಿಗೊಮ್ಮೆ ಖಾತೆಗೆ ಲಾಗ್ ಇನ್ ಆಗಬೇಕು. ಬ್ಲೂ ಟಿಕ್‌ ಹೊಂದಿರುವವರು ತಮ್ಮ ಖಾತೆ ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಯಮಗಳ ಪ್ರಕಾರ,  ಖಾತೆಗಳು ಇಮೇಲ್ ವಿಳಾಸ, ಮೊಬೈಲ್‌ ಸಂಖ್ಯೆ, ಪ್ರೊಫೈಲ್ ಇಮೇಜ್ ಮತ್ತು ಖಾತೆ ಹೆಸರನ್ನು ಒಳಗೊಂಡಿರಬೇಕು. ಇದೆಲ್ಲವೂ ಇದ್ದರಷ್ಟೇ ಖಾತೆ ಪರಿಪೂರ್ಣ ಆಗಲಿದೆ ಎಂದು ಹೇಳಲಾಗಿದೆ.

ಎಷ್ಟು ಖಾತೆಗಳ ಬ್ಲೂಟಿಕ್ ತೆಗೆಯಲಾಗಿದೆ?
ಇನ್ನು ಟ್ವಿಟರ್‌ ತನ್ನ ಈ ನೀತಿಯ ಆಧಾರದಲ್ಲಿ ಎಷ್ಟು ಖಾತೆಗಳ ಬ್ಲೂ ಟಿಕ್‌ ಅನ್ನು ತೆಗೆದು ಹಾಕಿದೆ ಎಂಬುದರ ಕುರಿತು ಮಾಹಿತಿ ನೀಡಿಲ್ಲ. ಆದರೆ ಶನಿವಾರ ವೆಂಕಯ್ಯ ನಾಯ್ಡು ಅವರ ಟ್ವಿಟರ್‌ ಖಾತೆಯ ಬ್ಲೂ ಟಿಕ್‌ ತೆಗೆದಿದ್ದ ಟ್ವಿಟರ್‌, ನೆಟ್ಟಿಗರ ಆಕ್ರೋಶದ ನಂತರ ಅದನ್ನು ಮರುಸ್ಥಾಪಿಸಿತ್ತು. ಆನಂತರ ಆರ್‌ಎಸ್‌ಎಸ್‌  ವರಿಷ್ಟ ಮೋಹನ್‌ ಭಾಗವತ್‌ ಮತ್ತು ಸಂಘದ ಸುರೇಶ್‌ ಜೋಷಿ, ಅರುಣ್‌ ಕುಮಾರ್‌ ಖಾತೆಗಳ ಬ್ಲೂಟಿಕ್‌ಗಳನ್ನೂ ತೆಗೆದು ಹಾಕಿತ್ತು.  ಇದಾದ ನಂತರ ಟ್ವಿಟರ್‌ನಲ್ಲಿ ಟ್ವಿಟರ್‌ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. #BanTwitterInIndia ಎಂಬ ಹ್ಯಾಷ್‌ಟ್ಯಾಗ್‌ ಕೂಡ ಟ್ರೆಂಡ್‌ ಆಗಿತ್ತು. ಇದೀಗ ಮೋಹನ್‌  ಭಾಗವತ್‌ ಸೇರಿದಂತೆ ಹಲವರ ಬ್ಲೂ ಟಿಕ್‌ ಅನ್ನು ಟ್ವಿಟರ್‌ ಮರುಸ್ಥಾಪಿಸಿದೆ. 

ಏನಿದು ಬ್ಲೂ ಟಿಕ್‌, ಅದರ ಪ್ರಯೋಜನವೇನು? 
ಸಾರ್ವಜನಿಕ ಹಿತಾಸಕ್ತಿಯ ಖಾತೆಗಳನ್ನು ನೀಲಿ ಬ್ಯಾಡ್ಜ್ ಅಥವಾ ಬ್ಲೂಟಿಕ್ ಖಚಿತಪಡಿಸುತ್ತದೆ. ಇದನ್ನು ಪಡೆಯಲು ಖಾತೆದಾರರು ದೃಢೀಕೃತ ಮಾಹಿತಿ ಪೂರೈಸಬೇಕು. ಸಾಮಾನ್ಯವಾಗಿ ಸಿನಿಮಾ ನಟರು, ರಾಜಕೀಯ ಗಣ್ಯರು ಮತ್ತು ಇತರೆ ವಲಯಗಳ ಪ್ರಮುಖರ ಖಾತೆಗಳನ್ನು ಅಧಿಕೃತವೇ ಇಲ್ಲವೇ ಎಂಬುದನ್ನು  ಗುರುತಿಸಲು ಈ ಬ್ಲೂಟಿಕ್ ನೆರೆವಾಗುತ್ತದೆ.

SCROLL FOR NEXT