ದೇಶ

ಪೂರ್ವ ಲಡಾಖ್ ನಲ್ಲಿ ಸುಮಾರು ಎರಡು ಡಜನ್ ಚೀನಾ ಯುದ್ಧ ವಿಮಾನಗಳ ಹಾರಾಟ!

Nagaraja AB

ನವದೆಹಲಿ:  ಸುಮಾರು ಒಂದು ವರ್ಷದಿಂದಲೂ ಭಾರತ ಹಾಗೂ ಚೀನಾ ಮಿಲಿಟರಿ ವಿವಾದವೇರ್ಪಟ್ಟಿರುವಂತೆಯೇ ಇದೀಗ, ಚೀನಾದ ವಾಯುಪಡೆ ಇತ್ತೀಚಿಗೆ ಪೂರ್ವ ಲಡಾಖ್ ನಲ್ಲಿ ದೊಡ್ಡ ವೈಮಾನಿಕ ಪ್ರದರ್ಶನ ನಡೆಸಿವೆ. ಇದನ್ನು ಭಾರತೀಯ ಸೇನೆ ಹತ್ತಿರದಿಂದ ವೀಕ್ಷಿಸಿದೆ.

ಜೆ-11ಎಸ್ ಮತ್ತು ಕೆಲವು ಜೆ-16 ಯುದ್ಧ ವಿಮಾನಗಳು ಸೇರಿದಂತೆ ಸುಮಾರು 21 ರಿಂದ 22 ಚೀನಾದ ಯುದ್ಧ ವಿಮಾನಗಳು ಪೂರ್ವ ಲಡಾಖ್ ನಲ್ಲಿ ಭಾರತದ ಗಡಿಗೆ ಎದುರಿಗೆ ಪ್ರದರ್ಶನ ನಡೆಸಿವೆ ಎಂದು ರಕ್ಷಣಾ ಮೂಲಗಳು ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇತ್ತೀಚಿಗೆ ಈ ಕಾರ್ಯಾಚರಣೆ ನಡೆದಿದ್ದು, ಭಾರತೀಯ ಸೇನೆ ಹತ್ತಿರದಿಂದ ಅವುಗಳನ್ನು ವೀಕ್ಷಿಸಿವೆ. ಎಲ್ಲಾ ವಿಧದ ಯುದ್ಧದ
ಕಾರ್ಯಾಚರಣೆಗೆ ಸಮರ್ಥ ರೀತಿಯಲ್ಲಿ ಇತ್ತೀಚಿಗೆ ಆಧುನೀಕರಿಸಿರುವ ಹೊಟಾನ್, ಗರ್ ಗುನ್ಸಾ ಮತ್ತು ಕಾಸ್ಗರ್  ವಾಯುನೆಲೆ ಸೇರಿದಂತೆ ತನ್ನ ವಾಯುನೆಲೆಗಳಲ್ಲಿ ಚೀನಾದ ಯುದ್ಧ ವಿಮಾನಗಳು ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಲಡಾಖ್ ನಲ್ಲಿ ಕಳೆದ ವರ್ಷದಿಂದಲೂ ಭಾರತೀಯ ಯುದ್ಧ ವಿಮಾನಗಳ ಚಟುವಟಿಕೆಯೂ ಗಮನಾರ್ಹ ರೀತಿಯಲ್ಲಿ ಹೆಚ್ಚಾಗಿದೆ. ಪಾಂಗಂಗ್ ಕೆರೆ ಪ್ರದೇಶದಿಂದ ತನ್ನ ಸೇನೆಯನ್ನು ಚೀನಾ ಹಿಂತೆಗೆದುಕೊಂಡಿದ್ದರೂ, ವಿಮಾನಗಳನ್ನು ಧೀರ್ಘ ವ್ಯಾಪ್ತಿಯವರೆಗೂ ಗುರಿಯಾಗಿಸಬಲ್ಲಾ ಹೆಚ್ ಕ್ಯೂ-9 ಮತ್ತು ಹೆಚ್ ಕ್ಯೂ-16 ಸೇರಿದಂತೆ ತಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಅವರು ಹಿಂಪಡೆದಿಲ್ಲ ಎಂದು ಮೂಲಗಳು ಉಲ್ಲೇಖಿಸಿವೆ.

ಕ್ಸಿಂಜಿಯಾಂಗ್ ಮತ್ತು ಟಿಬೆಟ್ ಪ್ರದೇಶದ ಪಂಗಟ್ ಮತ್ತು ಹೂಟನ್ ಗರ್ ಗುನ್ಸಾ, ಕಾಸ್ಘರ್, ಹೊಪ್ಪಿಂಗ್, ಡಿಜಾಂಗ್, ಲಿಂಝಿ ವಾಯುನೆಲೆ ಸೇರಿದಂತೆ ಚೀನಾದ ವಾಯುಪಡೆಯ ಚಟುವಟಿಕೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎನ್ನಲಾಗಿದೆ.

SCROLL FOR NEXT