ದೇಶ

ರಾಜ್ಯದ ಜನಸಂಖ್ಯೆ, ಕೋವಿಡ್ ಪ್ರಮಾಣದ ಆಧಾರದ ಮೇಲೆ ಲಸಿಕೆ ಹಂಚಿಕೆ: ಕೇಂದ್ರದ ಹೊಸ ಮಾರ್ಗಸೂಚಿ

Srinivas Rao BV

ನವದೆಹಲಿ: ಜೂ.21 ರಿಂದ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಲಸಿಕೆ ಪೂರೈಕೆ ಮಾಡುವ  ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯ ಬಳಿಕ ಕೇಂದ್ರ ಸರ್ಕಾರ ಹೊಸ ಲಸಿಕೆ ನೀತಿಯನ್ನು ಘೋಷಿಸಿದೆ. 

ಜೂ.21 ರಿಂದ ಹೊಸ ಲಸಿಕೆ ನೀತಿ ಜಾರಿಗೆ ಬರಲಿದ್ದು, ಕಾಲ ಕಾಲಕ್ಕೆ ಪರಿಷ್ಕರಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದಲ್ಲಿ ಲಸಿಕೆ ಉತ್ಪಾದನೆ ಮಾಡುವವರಿಂದ ಶೇ.75 ರಷ್ಟು ಲಸಿಕೆಗಳನ್ನು ಭಾರತ ಸರ್ಕಾರ ಖರೀದಿಸಿ ಸಂಗ್ರಹಿಸಲಿದೆ. ಈ ರೀತಿ ಸಂಗ್ರಹಿಸಲಾದ ಲಸಿಕೆಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಇವುಗಳನ್ನು ಸರ್ಕಾರಗಳಿಂದ ಜನತೆಗೆ ಉಚಿತವಾಗಿ ನೀಡಲಾಗುತ್ತದೆ. 

ಜೂ.07 ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಜೂ.21 ರಿಂದ ಹೊಸ ಲಸಿಕೆ ನೀತಿಯನ್ನು ಘೋಷಿಸಿದ್ದರು. ಹೊಸ ನೀತಿಯಡಿ ಶೇ.25 ರಷ್ಟು ಲಸಿಕೆ ಖಾಸಗಿ ವಲಯಕ್ಕೆ ಹಾಗೂ 18 ರ ಮೇಲ್ಪಟ್ಟ ವಯಸ್ಸಿನವರಿಗೆ ಉಚಿತ ಲಸಿಕೆ ನೀಡುವುದಕ್ಕೆ ಲಭ್ಯವಿರಲಿದೆ.  

ಲಸಿಕೆ ಡೋಸ್ ಗಳನ್ನು ಕೇಂದ್ರ ಸರ್ಕಾರ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಜನಸಂಖ್ಯೆ, ರೋಗದ ಪ್ರಮಾಣ, ಲಸಿಕೆ ಅಭಿಯಾನದ ಪ್ರಗತಿಗಳ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಲಸಿಕೆ ಪೋಲಾಗುವುದೂ ಸಹ ಹಂಚಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ಕೇಂದ್ರದ ಹೊಸ ಲಸಿಕೆ ನೀತಿಯಲ್ಲಿ ತಿಳಿಸಲಾಗಿದೆ. 

ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, 1.19 ಕೋಟಿ ಲಸಿಕೆಗಳು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದ್ದು ಈ ವರೆಗೂ 24 ಕೋಟಿ ಲಸಿಕೆ ಡೋಸ್ ಗಳನ್ನು ಕೇಂದ್ರಾಡಳಿತ/ ರಾಜ್ಯಗಳಿಗೆ ಉಚಿತವಾಗಿ ಕೇಂದ್ರ ಸರ್ಕಾರದಿಂದ ನೀಡಲಾಗಿದೆ.

SCROLL FOR NEXT