ದೇಶ

ಕಾಂಗ್ರೆಸ್ ಗೆ ಮೇಜರ್ ಸರ್ಜರಿಯ ಅಗತ್ಯವಿದೆ: ಜಿತಿನ್ ಪ್ರಸಾದ ನಿರ್ಗಮನ ಬೆನ್ನಲ್ಲೇ ವೀರಪ್ಪ ಮೊಯ್ಲಿ ಹೇಳಿಕೆ

Nagaraja AB

ನವದೆಹಲಿ: ಕಾಂಗ್ರೆಸ್ ಗೆ ಮೇಜರ್ ಸರ್ಜರಿಯ ಅಗತ್ಯವಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ. ಜಿತಿನ್ ಪ್ರಸಾದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ, ವೀರಪ್ಪ ಮೊಯ್ಲಿ ಈ ಹೇಳಿಕೆ ನೀಡಿದ್ದು, ನಾಯಕರಿಗೆ ಜವಾಬ್ದಾರಿಯನ್ನು ವಹಿಸುವಾಗ ಉನ್ನತ ನಾಯಕತ್ವ ಸೈದ್ಧಾಂತಿಕ ಬದ್ಧತೆಗೆ ಆದ್ಯತೆ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಜಿತಿನ್  ಪ್ರಸಾದ ಎಲ್ಲಕ್ಕಿಂತ ಹೆಚ್ಚಾಗಿ ವೈಯಕ್ತಿಕ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ ಮೊಯ್ಲಿ, ಉತ್ತರ ಪ್ರದೇಶದ ನಾಯಕನ ಸೈದ್ಧಾಂತಿಕ ಬದ್ಧತೆಯು ಮೊದಲಿನಿಂದಲೂ ಶಂಕಿತವಾಗಿದೆ ಮತ್ತು ಅವರ ಉಸ್ತುವಾರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಪಕ್ಷವು ಶೂನ್ಯ ಸ್ಥಾನಗಳನ್ನು ಗೆದ್ದಿದೆ ಎಂದು ಅವರು ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೊಯ್ಲಿ, ಉನ್ನತ ನಾಯಕತ್ವವು ಪಕ್ಷದ ನಾಯಕರ ಬಗ್ಗೆ ಸರಿಯಾದ ಮೌಲ್ಯಮಾಪನ ಮಾಡಬೇಕು, ಅರ್ಹತೆ ಇಲ್ಲದಂತಹ ಜನರನ್ನು ನಾಯಕರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಕಾಂಗ್ರೆಸ್ ಈ ಕೆಲವು ವಿಷಯಗಳನ್ನು ಪುನರ್ವಿಮರ್ಶಿಸಬೇಕು ಮತ್ತು ಮರು-ಕಾರ್ಯತಂತ್ರ ಮಾಡಬೇಕಾಗಿದೆ ನಂತರ ಮಾತ್ರ ಪಕ್ಷ ಮುಂದೆ ಸಾಗಬೇಕಾಗಿದೆ ಎಂದು ಮಾಜಿ ಕೇಂದ್ರ ಸಚಿವ ಹೇಳಿದರು.

ಸ್ಪರ್ಧೆ ಎದುರಿಸಲು ಕಾಂಗ್ರೆಸ್ ಪಕ್ಷಕ್ಕೆ ಮೇಜರ್ ಸರ್ಜರಿಯ ಅಗತ್ಯವಿದೆ ಎಂಬುದಾಗಿ 2019 ರ ಚುನಾವಣೆಯಲ್ಲಿ ಸೋತಾಗಲೇ ಸಲಹೆ ಮಾಡಿದ್ದೆ. ಆದಾಗ್ಯೂ, ಅದು ಧೀರ್ಘ ವಿಳಂಬವಾಗಿದೆ. ಇದೀಗ ಅದು ಅಗತ್ಯವಾಗಿದೆ. ನಾಳೆ ಎಂಬುದು ಇಲ್ಲ. ಮುಂದಿನ ವರ್ಷ ಏಳು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸಬೇಕಾಗಿದೆ. ತದನಂತರ ಕೂಡಲೇ ಸಂಸತ್ ಚುನಾವಣೆ ಬರಲಿದೆ. ಏಳು ರಾಜ್ಯಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಿನ ಕಷ್ಟವಾಗಲಿದೆ ಎಂದು ಮೊಯ್ಲಿ ಹೇಳಿದರು.

SCROLL FOR NEXT