ದೇಶ

ಪಡಿತರ ಮಾಫಿಯಾ ಹಿಡಿತದಲ್ಲಿ ಅರವಿಂದ ಕೇಜ್ರೀವಾಲ್‌ ಸರ್ಕಾರ: ಬಿಜೆಪಿ ಆರೋಪ

Nagaraja AB

ನವದೆಹಲಿ: ದೆಹಲಿ ಸರ್ಕಾರದ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯನ್ನು ಬಿಜೆಪಿ ಹಿರಿಯ ನಾಯಕ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟೀಕಿಸಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಜನರಿಗೆ ಕೋವಿಡ್  ಸಂಕಷ್ಟದ ಪರಿಸ್ಥಿತಿಯಲ್ಲಿ ಅತ್ಯಗತ್ಯವಾಗಿದ್ದ ವೈದ್ಯಕೀಯ ಆಕ್ಸಿಜನ್ ಪೂರೈಸುವಲ್ಲಿ ವಿಫಲವಾಗಿರುವ ಅರವಿಂದ ಕೇಜ್ರೀವಾಲ್ ಸರ್ಕಾರ, ಈಗ ಮನೆಬಾಗಲಿಗೆ ಪಡಿತರ ಪೂರೈಸುವ ಯೋಜನೆ ಬಗ್ಗೆ ಮಾತನಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ದೆಹಲಿ ಸರ್ಕಾರ ಪಡಿತರ ಮಾಫಿಯಾದ ಹಿಡಿತದಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.

ದೇಶದ  34 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆ ಅಳವಡಿಸಿಕೊಂಡಿದ್ದರೆ, ಕೇವಲ ದೆಹಲಿ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳು ಮಾತ್ರ ಈ ಯೋಜನೆ ಅಳವಡಿಸಿಕೊಂಡಿಲ್ಲ. ಯೋಜನೆಯನ್ನು ದೆಹಲಿಯಲ್ಲಿ ಏಕೆ ಜಾರಿಗೊಳಿಸಿಲ್ಲ ಎಂಬುದಕ್ಕೆ ದೆಹಲಿ ಮುಖ್ಯಮಂತ್ರಿ ಸೂಕ್ತ  ಉತ್ತರ ನೀಡಬೇಕು ಎಂದು ಸಚಿವ ರವಿಶಂಕರ್ ಪ್ರಸಾದ್ ಒತ್ತಾಯಿಸಿದ್ದಾರೆ. 

SCROLL FOR NEXT