ದೇಶ

ಅಸ್ಸಾಂ: ಪ್ರತಿದಿನ 3 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲು 2,000 ತಂಡಗಳ ರಚನೆ!

Vishwanath S

ಗುವಾಹಟಿ: ಸಾಕಷ್ಟು ಸಂಖ್ಯೆಯ ಡೋಸ್‌ಗಳು ಲಭ್ಯವಿರುವುದರಿಂದ ಪ್ರತಿದಿನ ಮೂರು ಲಕ್ಷ ಜನರಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ 2,000 ತಂಡಗಳನ್ನು ರಚಿಸಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಕೇಶಬ್ ಮಹಂತಾ ಶನಿವಾರ ತಿಳಿಸಿದ್ದಾರೆ.

ಸರ್ಕಾರದ ಬಳಿ ಕೋವ್ಯಾಕ್ಸಿನ್ ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ 18-44 ವರ್ಷ ವಯಸ್ಸಿನ ಜನರಿಗೆ ಎರಡನೇ ಡೋಸ್ ನೀಡಲು ನಿರ್ಧರಿಸಲಾಗಿದೆ. 

ನಾವು ಪ್ರತಿದಿನ ನಾಲ್ಕು ಲಕ್ಷ ಜನರಿಗೆ ಲಸಿಕೆ ಹಾಕುವ 2,000 ತಂಡಗಳನ್ನು ಸಿದ್ಧಪಡಿಸಿದ್ದೇವೆ. ಆದರೆ, ಸದ್ಯಕ್ಕೆ ಪ್ರತಿದಿನ ಮೂರು ಲಕ್ಷ ಜನರಿಗೆ ಚುಚ್ಚುಮದ್ದು ನೀಡುವ ಗುರಿ ಹಾಕಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಲಸಿಕೆಗಳ ಲಭ್ಯತೆ ಹೆಚ್ಚಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಮಹಂತಾ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಹಂತಾ, ರಾಜ್ಯದಲ್ಲಿ ಒಟ್ಟು 3,80,900 ಲಸಿಕೆಗಳಿವೆ. ಇದರಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ 2,43,460 ಮತ್ತು 18-44 ವರ್ಷ ವಯಸ್ಸಿನವರಿಗೆ 1,37,440 ಲಸಿಕೆಗಳಿವೆ ಎಂದಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದಿನಕ್ಕೆ 1 ಲಕ್ಷ ಜನರಿಗೆ ಚುಚ್ಚುಮದ್ದು ನೀಡುವ ಸಾಮರ್ಥ್ಯ ರಾಜ್ಯಕ್ಕಿದೆ. ಆದರೆ ಸರಬರಾಜು ಕೊರತೆಯಿಂದಾಗಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾದಾಗಿನಿಂದ ಹೆಚ್ಚಿನ ದಿನಗಳಲ್ಲಿ ಅದರ ಸಾಮರ್ಥ್ಯಕ್ಕಿಂತ ಅರ್ಧಕ್ಕಿಂತ ಕಡಿಮೆ ಪ್ರಮಾಣದಲ್ಲಿ ಲಸಿಕೆ ಹಾಕಬೇಕಾಗಿತ್ತು ಎಂದು ಹೇಳಿದ್ದರು.

18-44 ವರ್ಷಗಳ ವಿಭಾಗದಲ್ಲಿ 1.92 ಲಕ್ಷ ಜನರಿಗೆ ಕೋವಾಕ್ಸಿನ್‌ನ ಎರಡನೇ ಡೋಸ್ ಅನ್ನು ನಿಗದಿತ ಸಮಯದೊಳಗೆ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವರು ಹೇಳಿದರು.

ಗುವಾಹಟಿಯ 12 ಲಕ್ಷ ಜನಸಂಖ್ಯೆಯಲ್ಲಿ 6.06 ಲಕ್ಷ ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ ಎಂದು ಅವರು ಹೇಳಿದರು. ನಾವು ಇಂದಿನಿಂದ ನಗರದಲ್ಲಿ ವಿಶೇಷ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಾರಂಭಿಸಿದ್ದೇವೆ. ಮುಂದಿನ ಎರಡು ದಿನಗಳಲ್ಲಿ ಏಳು ಲಕ್ಷ ಗಡಿ ದಾಟುವ ಭರವಸೆ ಇದೆ. ತದ ನಂತರ ಕೇವಲ ಮೂರು ಲಕ್ಷ ಅರ್ಹರು ಮಾತ್ರ ಉಳಿದಿರುತ್ತಾರೆ ಎಂದು ಮಹಂತಾ ಹೇಳಿದರು.

SCROLL FOR NEXT