ದೇಶ

ಕೇಸರಿ ಪಕ್ಷದಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ: ಟಿಎಂಸಿಗೆ ವಾಪಸ್ಸಾದ ನಂತರ ಮುಕುಲ್ ರಾಯ್ ಹೇಳಿಕೆ

Nagaraja AB

ಕೊಲ್ಕತ್ತಾ: ಬಿಜೆಪಿಯಲ್ಲಿ ಮಂದುವರೆಯಲು ಸಾಧ್ಯವಾಗಲಿಲ್ಲ ಆದ್ದರಿಂದ ತನ್ನ ಹಳೆಯ ಪಕ್ಷಕ್ಕೆ ವಾಪಸ್ಸಾಗಲು ನಿರ್ಧರಿಸಿದ್ದಾಗಿ ಮುಕುಲ್ ರಾಯ್ ಸ್ಪಷ್ಟಪಡಿಸಿದ್ದಾರೆ. ಮೂರು ವರ್ಷ ಹಾಗೂ 9 ತಿಂಗಳು ಕಾಲ ಬಿಜೆಪಿಯಲ್ಲಿದ್ದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್, ಕೇಸರಿ ಪಕ್ಷ ಬಿಡಲು ಕಾರಣದ ಬಗ್ಗೆ ಹೇಳಿಕೆ ನೀಡುವುದಾಗಿ ಅವರು ತಿಳಿಸಿದರು.

ಬಿಜೆಪಿಯಲ್ಲಿ ಮುಂದುವೆರೆಯಲು ಸಾಧ್ಯವಾಗಲಿಲ್ಲ, ನನ್ನ ಹಳೆಯ ಸ್ಥಳಕ್ಕೆ ವಾಪಸ್ಸಾಗಿದ್ದೇನೆ. ಏಕೆ ನಾನು ಈ ನಿರ್ಧಾರವನ್ನು ತೆಗೆದುಕೊಂಡೆ ಎಂಬುದನ್ನು ವಿವರವಾಗಿ ಲಿಖಿತವಾಗಿ ಹೇಳುತ್ತೇನೆ ಎಂದರು. ಪಕ್ಷಕ್ಕೆ ವಾಪಸ್ಸಾದ ಮುಕುಲ್ ರಾಯ್ ಅವರನ್ನು  ಸ್ವಾಗತಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯಲ್ಲಿ ಅವರಿಗೆ ಸಂತೋಷವಿರಲಿಲ್ಲ. ಅಲ್ಲದೇ ಅವರು ದೈಹಿಕವಾಗಿಯೂ ಆರೋಗ್ಯವಾಗಿರಲಿಲ್ಲ ಎಂದು ಹೇಳಿದರು.

ಬಿಜೆಪಿಯಲ್ಲಿ ಅವರನ್ನು ಕಡೆಗಣಿಸಲಾಗಿತ್ತು. ರಾಯ್ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ನಡುವಣ ಹಲವು ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯ ಭುಗಿಲೆದಿತ್ತು ಎಂದು ಮುಕುಲ್ ರಾಯ್ ಅವರ ಆಪ್ತರಾದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಮುಕುಲ್ ರಾಯ್ ಪ್ರಮುಖ ಪಾತ್ರ ವಹಿಸಿದ್ದರಿಂದ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ. ಬಂಗಾಳದಲ್ಲಿ ಅವರಿಗೆ ಯಾವುದೇ ಸಂಘಟನಾತ್ಮಕ ಜವಾಬ್ದಾರಿ ನೀಡಲಿಲ್ಲ. ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷದ ಕಾರ್ಯತಂತ್ರದಲ್ಲಿ ಅವರು ಪಾಲ್ಗೊಂಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಮುಕುಲ್ ರಾಯ್ ಅಸಂತೋಷ ಸ್ಪಷ್ಪವಾಯಿತು. ಘೋಷ್ ನಡೆಸಿದ್ದ ಎರಡು ಸಭೆಗಳಿಗೆ ಗೈರಾಗಿದ್ದರು. ಈ ಸಭೆಗಳಿಗೆ ನನ್ನನ್ನು ಆಹ್ವಾನಿಸಿರಲಿಲ್ಲ ಎಂದು ರಾಯ್ ಹೇಳಿದ್ದರು. ಚುನಾವಣಾ ಕೌಶಲ್ಯ ಹೊಂದಿದ್ದ ರಾಯ್ ಅವರನ್ನು ಬಿಜೆಪಿ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

SCROLL FOR NEXT