ದೇಶ

ಕಾಂಗ್ರೆಸ್ ನಲ್ಲಿ ಜಡತ್ವ ಇಲ್ಲವೆಂಬುದನ್ನು ತೋರಿಸಲು ಸುಧಾರಣೆಗಳ ಅಗತ್ಯವಿದೆ: ಕಪಿಲ್ ಸಿಬಲ್ 

Srinivas Rao BV

ನವದೆಹಲಿ: ಕಾಂಗ್ರೆಸ್ ನಲ್ಲಿ ಆಮೂಲಾಗ್ರ ಸುಧಾರಣೆಗಳಾಗಿ ಬಿಜೆಪಿಗೆ ಸೂಕ್ತವಾದ ಪರ್ಯಾಯವಾದ ವಿರೋಧಪಕ್ಷವಾಗಿ ತನ್ನನ್ನು ಪ್ರಸ್ತುತಪಡಿಸಿಕೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ. 

ಕಾಂಗ್ರೆಸ್ ನಲ್ಲಿ ಆಂತರಿಕ ಸುಧಾರಣೆಗಳು ಹಾಗೂ ನಾಯಕತ್ವಕ್ಕೆ ಸಂಬಂಧಿಸಿದಂತೆ ಕೂಲಂಕುಷ ಪರೀಕ್ಷೆ ನಡೆಸುವ ಸಂಬಂಧ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷರಾದ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಜಿ-23 (ಗ್ರೂಪ್ 23) ನಾಯಕರ ಪೈಕಿ ಕಪಿಲ್ ಸಿಬಲ್ ಸಹ ಇದ್ದರು. ಈಗ ಮತ್ತೊಮ್ಮೆ ಕಾಂಗ್ರೆಸ್ ನಲ್ಲಿ ಆಂತರಿಕ ಸುಧಾರಣೆಗಳಾಗಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಕಪಿಲ್ ಸಿಬಲ್, ಇತ್ತೀಚೆಗಷ್ಟೇ ಮುಂದೂಡಲ್ಪಟ್ಟಿದ್ದ ಸಂಘಟನೆಗೆ ಸಂಬಂಧಿಸಿದ ಚುನಾವಣೆ ಶೀಘ್ರವೇ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಪಿಲ್ ಸಿಬಲ್, ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಪರ್ಯಾಯವಾದ ಬಲಿಷ್ಠ ರಾಜಕೀಯ ಆಯ್ಕೆಗಳು ಇಲ್ಲ, ಆದರೆ ಮೋದಿ ದೇಶವನ್ನು ಆಳುವ ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಪರ್ಯಾಯವಾದ ಆಯ್ಕೆಯಾಗಿ ಗುರುತಿಸಿಕೊಳ್ಳಬಹುದು ಎಂದು ಸಿಬಲ್ ಹೇಳಿದ್ದಾರೆ. ಚುನಾವಣೆ ಸೋಲುತ್ತಿರುವುದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಸಮಿತಿಗಳನ್ನು ರಚಿಸುವುದು ಒಳ್ಳೆಯದೇ ಆದರೆ ಸೂಚಿಸಿದ ಪರಿಹಾರಗಳನ್ನು ಜಾರಿಗೆ ತರದೇ ಇದ್ದಲ್ಲಿ ಸಮಿತಿಗಳಿಂದ ಯಾವುದೇ ಪ್ರಯೋಜನಗಳೂ ಇಲ್ಲ ಎಂದು ಕಪಿಲ್ ಸಿಬಲ್ ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT