ದೇಶ

ದೆಹಲಿ ಅನ್‌ಲಾಕ್‌: ಪ್ರತಿದಿನ ಮಾಲ್, ಮಾರುಕಟ್ಟೆ, ಶೇ.50ರಷ್ಟು ಸಾಮರ್ಥ್ಯದೊಂದಿಗೆ ರೆಸ್ಟೋರೆಂಟ್‌ ಓಪನ್

Vishwanath S

ನವದೆಹಲಿ: ದೆಹಲಿ ಸರ್ಕಾರ ಹಂತಹಂತವಾಗಿ ಅನ್‌ಲಾಕ್‌ ಪ್ರಕ್ರಿಯೆ ಆರಂಭಿಸಿದ್ದು, ಜೂನ್ 14ರಿಂದ ಪ್ರತಿದಿನ ಮಾಲ್, ಮಾರುಕಟ್ಟೆ, ಶೇ.50ರಷ್ಟು ಸಾಮರ್ಥ್ಯದೊಂದಿಗೆ ರೆಸ್ಟೋರೆಂಟ್‌ ಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಇದೇ ವೇಳೆ, ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಉತ್ಸವ ಕೂಟಗಳು, ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು, ಈಜುಕೊಳಗಳು, ಜಿಮ್‌ಗಳು ಮತ್ತು ಸಾರ್ವಜನಿಕ ಉದ್ಯಾನವನಗಳು ಸೇರಿದಂತೆ ಕೆಲವು ಚಟುವಟಿಕೆಗಳು ಮತ್ತು ಸೇವೆಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. 

ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲಾಗುತ್ತದೆ ಆದರೆ ದರ್ಶನಕ್ಕೆ ಅವಕಾಶ ಇಲ್ಲ. ಬೆಸ-ಸಮ ಆಧಾರದಲ್ಲಿ ಮಾರುಕಟ್ಟೆಗಳು, ಮಾಲ್‌ಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳು ಮತ್ತೆ ತೆರೆಯಲು ಅನುಮತಿಸಲಾಗಿದ್ದು ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 10ರವರೆಗೆ ತೆರೆದಿರಲಿವೆ ಎಂದು ಕೇಜ್ರಿವಾಲ್ ಹೇಳಿದರು.

ದೆಹಲಿಯಲ್ಲಿ ಕೊರೋನಾ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ಜನರೂ ಎಚ್ಚರದಿಂದಿರಬೇಕು ಇಲ್ಲದಿದ್ದರೆ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ತಿರುಗಬಹುದು ಎಂದು ಎಚ್ಚರಿಸಿದ್ದಾರೆ 

ಇನ್ನು ನಿನ್ನೆ ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ 213 ಕೊರೋನಾ ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಇದು ಮೂರು ತಿಂಗಳಲ್ಲಿ ಅತಿ ಕಡಿಮೆ ಪ್ರಕರಣವಾಗಿದೆ. ಇನ್ನು ನಿನ್ನೆ ಒಂದೇ ದಿನ 28 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 0.30ಕ್ಕೆ ಇಳಿದಿದೆ. 

SCROLL FOR NEXT