ದೇಶ

ರಾಜಸ್ಥಾನ ಸಂಪುಟ ವಿಸ್ತರಣೆ: ವಲಸಿಗರಿಂದಲೂ ಸಚಿವ ಸ್ಥಾನಕ್ಕೆ ಪಟ್ಟು; ಹೆಚ್ಚಿದ ಬಿಕ್ಕಟ್ಟು

Srinivas Rao BV

ಜೈಪುರ: ಮೂಲತಃ ಸಚಿನ್ ಪೈಲಟ್ ಬಣದ ಶಾಸಕರ ಬೇಡಿಕೆಯಾಗಿದ್ದ ರಾಜಸ್ಥಾನ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಈಗ ಮತ್ತಷ್ಟು ಉಲ್ಬಣಿಸಿದೆ.

ಸಚಿನ್ ಪೈಲಟ್ ಅನುಯಾಯಿಗಳಿಂದ ಒತ್ತಡ ಬಂದ ಕೆಲವೇ ವಾರಗಳ ನಂತರ, 2 ವರ್ಷಗಳ ಹಿಂದೆ ಬಿಎಸ್ ಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಕಳೆದ ವರ್ಷದ ಬಿಕ್ಕಟ್ಟಿನಲ್ಲಿ ಸರ್ಕಾರದ ಉಳಿವಿಗೆ ಕಾರಣರಾಗಿರುವ ಆರು ಮಂದಿ ಶಾಸಕರು ಈಗ ತಮಗೂ ಸಚಿವ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದಾರೆ. 

ರಾಜಕೀಯ ವಿಶ್ಲೇಷಕರ ಪ್ರಕಾರ, ಸಚಿನ್ ಪೈಲಟ್ ಬಣದ ಶಾಸಕರಿಂದ ಎದುರಾಗುತ್ತಿರುವ ಒತ್ತಡವನ್ನು  ತಣ್ಣಗಾಗಿಸುವ ಉದ್ದೇಶದಿಂದ ಬಿಎಸ್ ಪಿಯ ಮಾಜಿ ಶಾಸಕರನ್ನು ಗೆಹ್ಲೋಟ್ ಬಣವೇ ಉತ್ತೇಜಿಸುತ್ತಿದ್ದಾರೆ.

ವಲಸಿಗ ಶಾಸಕರ ಪೈಕಿ ಒಬ್ಬರಾಗಿರುವ ಸಂದೀಪ್ ಯಾದವ್ ಈ ಬಗ್ಗೆ ಮಾತನಾಡಿದ್ದು, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸಮಸ್ಯೆಗಳಿವೆ, ಆದರೆ ಈಗ ಮಾಡಬೇಕು, ಈಗಾಗಲೇ ವಿಳಂಬವಾಗಿದೆ. ಸಿಎಂ ಗೆಹ್ಲೋಟ್ ಗೆ ಅನುಕೂಲವಾದಾಗ ಹಾಗೂ ಪರಿಸ್ಥಿತಿಗಳು ಸೂಕ್ತವಾಗಿದ್ದಾಗ ಸಚಿವ ಸಂಪುಟ ವಿಸ್ತರಣೆಯಾಗಲಿ, ಸಿಎಂ ಈ ಬಗ್ಗೆ ನಿರ್ಧರಿಸಲಿ ಎಂದು ಹೇಳಿದ್ದಾರೆ.

ತಿಜಾರ ಶಾಸಕ ಸಂದೀಪ್ ಯಾದವ್ ಹಾಗೂ ಇನ್ನೂ ಮೂವರು ಶಾಸಕರು, ಪೈಲಟ್ ಬಣದ ಶಾಸಕರನ್ನು ಕಾಂಗ್ರೆಸ್ ಹೈಕಮಾಂಡ್ ಸಮಾಧಾನಪಡಿಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ. ಕಳೆದ ವರ್ಷ ಸರ್ಕಾರ ಸಂಕಷ್ಟಕ್ಕೆ ಸಿಲುಕುವುದಕ್ಕೆ ಇದೇ ಪೈಲಟ್ ಬಣ ಕಾರಣ ಎಂದು ಆರೋಪಿಸಿದ್ದು, ಸರ್ಕಾರವನ್ನು ಉಳಿಸಿದವರನ್ನು, ಸರ್ಕಾರ ಉಳಿಸಿದವರ ನಿಷ್ಠೆಯನ್ನು ಗುರುತಿಸಿ ಬಹುಮಾನ ನೀಡಬೇಕು, ಸಚಿನ್ ಪೈಲಟ್ ಬಣಕ್ಕೆ ಅಲ್ಲ ಎಂದು ಯಾದವ್ ಹೇಳಿದ್ದಾರೆ. 

ಸಚಿನ್ ಪೈಲಟ್ ಬಣದ ಮುಕೇಶ್ ಭಾಕರ್ ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, "ಎರಡೂ ವರೆ ವರ್ಷಗಳಲ್ಲಿ ಮೂರು ಪಕ್ಷ ಬದಲಾವಣೆ ಮಾಡಿದವರು ನಿಷ್ಠೆಯ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದ ಜನಕ್ಕೆ ಯಾರು ನಿಷ್ಠಾವಂತರು, ವಿಶ್ವಾಸಾರ್ಹರು ಎಂಬುದು ತಿಳಿದಿದೆ" ಎಂದು ಮುಖೇಶ್ ತಿರುಗೇಟು ನೀಡಿದ್ದಾರೆ. 

SCROLL FOR NEXT