ದೇಶ

ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಎನ್ಐಎಯಿಂದ ಮಾಜಿ ಎನ್ ಕೌಂಟರ್ ಸ್ಪೆಶಲಿಸ್ಟ್ ಪ್ರದೀಪ್ ಶರ್ಮಾ ಬಂಧನ

Nagaraja AB

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ಬಳಿ ಸ್ಫೋಟಕ ಪ್ರಕರಣ ಮತ್ತು ಉದ್ಯಮಿ ಮನ್ಸುಖ್ ಹಿರಾನ್ ಹತ್ಯೆ ಪ್ರಕರಣದಲ್ಲಿ ಭಾಗಿ ಆರೋಪದ ಮೇರೆಗೆ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಗುರುವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎನ್‌ಐಎ ತಂಡವೊಂದು ಬುಧವಾರ ತಡರಾತ್ರಿ ಮುಂಬೈ ಬಳಿಯ ಲೋನಾವಾಲ ಬಳಿಯಿಂದ ಶರ್ಮಾ ಅವರನ್ನು ಎತ್ತಿಕೊಂಡು ಹೋಗಿದ್ದು, ವಿಚಾರಣೆಗಾಗಿ ದಕ್ಷಿಣ ಮುಂಬೈನ ಏಜೆನ್ಸಿಯ ಕೇಂದ್ರ ಕಚೇರಿಗೆ ಕರೆತರಲಾಯಿತು ಎಂದು ಅವರು ಹೇಳಿದರು.

ಅಂಧೇರಿಯ ಜೆ ಬಿ ನಗರದಲ್ಲಿರುವ ಆತನ ನಿವಾಸದ ಮೇಲೆ ಬೆಳಗ್ಗೆ 6 ಗಂಟೆ ಸುಮಾರಿಗೆ ಎನ್ ಐಎ ದಾಳಿ ನಡೆಸಿದೆ. ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ ಕೆಲವೊಂದು ಮಹತ್ವದ ದಾಖಲೆಗಳನ್ನು ಆತನ ಮನೆಯಿಂದ ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ತಾಸುಗಳ ವಿಚಾರಣೆ ಬಳಿಕ ಗುರುವಾರ ಆತನನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡ ಬಳಿಕ ಶರ್ಮಾನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಈ ಪ್ರಕರಣದಲ್ಲಿ ಎನ್ ಐಎ ಬಂಧಿಸಿರುವ ಪೊಲೀಸ್ ಇಲಾಖೆ ಸಿಬ್ಬಂದಿ ಪೈಕಿ ಶರ್ಮಾ ಐದನೇಯವರು ಮತ್ತು ಎಂಟನೇ ವ್ಯಕ್ತಿಯಾಗಿದ್ದಾರೆ.

SCROLL FOR NEXT