ದೇಶ

ಕೋವಿಡ್-19: ತೆಲಂಗಾಣದಲ್ಲಿ ಲಾಕ್ ಡೌನ್ ಸಂಪೂರ್ಣ ಹಿಂತೆಗೆತ

Srinivasamurthy VN

ಹೈದರಾಬಾದ್: ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಸಂಪೂರ್ಣ ಕಡಿಮೆಯಾದ ಹಿನ್ನಲೆಯಲ್ಲಿ ತೆಲಂಗಾಣ ಸರ್ಕಾರ ಲಾಕ್ ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿದೆ.

ಲಾಕ್ ಡೌನ್ ಭವಿಷ್ಯದ ಸಂಬಂಧ ಇಂದು ತೆಲಂಗಾಣ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿರ್ಬಂಧಗಳನ್ನು ಹಿಂದಕ್ಕೆ ಪಡೆಯಲಾಗಿದೆ.

ತೆಲಂಗಾಣದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಸೋಂಕು ಸಕಾರಾತ್ಮಕ ಪ್ರಮಾಣ ಕೂಡ ರಾಜ್ಯದಲ್ಲಿ ತುಂಬಾ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ತೆಲಂಗಾಣ ಸರ್ಕಾರ ಈ ಪ್ರಮುಖ ನಿರ್ಣಯ ಕೈಗೊಂಡಿದೆ.

ಆರೋಗ್ಯ ಅಧಿಕಾರಿಗಳು ಸಲ್ಲಿಸಿದ ವರದಿಗಳನ್ನು ಪರಿಶೀಲಿಸಿದ ನಂತರ, ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಕ್ಯಾಬಿನೆಟ್ ನಿರ್ಧರಿಸಿತು. ಏತನ್ಮಧ್ಯೆ, ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ಕ್ಯಾಬಿನೆಟ್ ಸಭೆ ಇನ್ನೂ ಮುಂದುವರೆದಿದ್ದು, ಕೃಷಿ, ನೀರಾವರಿ ಮತ್ತು ಇತರ ವಿಷಯಗಳು ಕ್ಯಾಬಿನೆಟ್‌ನ  ಕಾರ್ಯಸೂಚಿಯಲ್ಲಿವೆ ಎನ್ನಲಾಗಿದೆ. 

ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ತೆಲಂಗಾಣ ಮುಖ್ಯಮಂತ್ರಿಗಳ ಸಚಿವಾಲಯ, 'ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ, ಸಕಾರಾತ್ಮಕತೆಯ ಶೇಕಡಾವಾರು ಪ್ರಮಾಣವು ಗಮನಾರ್ಹವಾಗಿ ಕುಸಿದಿದೆ ಮತ್ತು  ಕೊರೋನಾ ಸಂಪೂರ್ಣ ನಿಯಂತ್ರಣದಲ್ಲಿದೆ. ಹೀಗಾಗಿ ಲಾಕ್ ಡೌನ್ ತೆರವುಗೊಳಿಸುವಂತೆ ವೈದ್ಯಕೀಯ ಅಧಿಕಾರಿಗಳು ನೀಡಿದ ವರದಿಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. 

ಅಂತೆಯೇ 'ಲಾಕ್ ಡೌನ್ ಸಮಯದಲ್ಲಿ ವಿಧಿಸಲಾದ ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ಕ್ಯಾಬಿನೆಟ್ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಜೂನ್ 19 ರವರೆಗೆ ಜಾರಿಯಲ್ಲಿದ್ದ ಲಾಕ್‌ಡೌನ್ ನಿರ್ಬಂಧಗಳನ್ನು ನಾಳೆಯಿಂದ ಅಂದರೆ ಜೂನ್ 20 ತೆಗೆದುಹಾಕಲು  ಕ್ಯಾಬಿನೆಟ್ ನಿರ್ಧರಿಸಿದೆ. ಜುಲೈ 1 ರಿಂದ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳನ್ನು ಪೂರ್ಣ ಸನ್ನದ್ಧತೆಯಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಲಾಕ್ ಡೌನ್ ನಿರ್ಬಂಧ ತೆಗೆದು ಹಾಕಿದ್ದರೂ ಜನರು ಕೊರೋನಾವನ್ನು ನಿರ್ಲಕ್ಷಿಸಬಾರದು ಮತ್ತು ಮಾಸ್ಕ್ ಗಳನ್ನು ಧರಿಸುವಂತಹ ಕೊರೋನಾ  ನಿಯಮಗಳನ್ನು ಪಾಲಿಸಬೇಕು ಎಂದು ಸರ್ಕಾರ ಹೇಳಿದೆ. 
 

SCROLL FOR NEXT