ದೇಶ

ದೆಹಲಿಯಲ್ಲಿ ಮತ್ತಷ್ಟು ಅನ್ಲಾಕ್: ನಾಳೆಯಿಂದ ಬಾರ್‌, ರೆಸ್ಟೋರೆಂಟ್, ಪಾರ್ಕ್ ತೆರೆಯಲು ಅವಕಾಶ

Vishwanath S

ನವದೆಹಲಿ: ಕೊರೋನಾ ಎರಡನೇ ಅಲೆಯಿಂದಾಗಿ ಹೇರಲಾಗಿದ್ದ ನಿರ್ಬಂಧಗಳನ್ನು ಹಂತ ಹಂತವಾಗಿ ಅನ್ಲಾಕ್ ಮಾಡುತ್ತಿರುವ ದೆಹಲಿ ಸರ್ಕಾರ ಸೋಮವಾರದಿಂದ ಬಾರ್, ಸಾರ್ವಜನಿಕ ಉದ್ಯಾನವನಗಳನ್ನು ಪುನಃ ತೆರೆಯಲು ಅನುಮತಿ ನೀಡಿದೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ) ಭಾನುವಾರದ ಆದೇಶದಲ್ಲಿ ಮುಂದಿನ ವಾರದಿಂದ ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಶೇಕಡ 50ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಾರ್‌ಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.

ಕೋವಿಡ್ ಸುರಕ್ಷತಾ ಕ್ರಮಗಳು ಮತ್ತು ಎಲ್ಲಾ ಅಧಿಕೃತ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳ ಮಾಲೀಕರು ಜವಾಬ್ದಾರರಾಗಿರುತ್ತಾರೆ ಎಂದು ಡಿಡಿಎಂಎ ಹೇಳಿದೆ.

ಸಾರ್ವಜನಿಕ ಉದ್ಯಾನವನಗಳು, ಗಾಲ್ಫ್ ಕ್ಲಬ್‌ಗಳನ್ನು ಮತ್ತೆ ತೆರೆಯಲಾಗುವುದು. ಅಲ್ಲದೆ ಹೊರಾಂಗಣ ಯೋಗ ಚಟುವಟಿಕೆಗಳಿಗೆ ಸಹ ಅವಕಾಶ ನೀಡಲಾಗುವುದು ಎಂದು ಡಿಡಿಎಂಎ ತನ್ನ ಆದೇಶದಲ್ಲಿ ತಿಳಿಸಿದೆ.

ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರಗಳು, ಜಿಮ್‌ಗಳು, ಸ್ಪಾಗಳು, ಎಲ್ಲಾ ರೀತಿಯ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕೂಟಗಳು ಸೇರಿದಂತೆ ನಿಷೇಧಿತ ಚಟುವಟಿಕೆಗಳು ಮತ್ತು ಸೇವೆಗಳು ಮುಂದಿನ ಆದೇಶದವರೆಗೆ ಅಂದರೆ ಜೂನ್ 28ರ ಬೆಳಿಗ್ಗೆ 5 ಗಂಟೆಯವರೆಗೆ ಮುಚ್ಚಲ್ಪಟ್ಟಿರುತ್ತವೆ.

ಕೊರೋನಾ ಎರಡನೇ ಅಲೆ ಉಲ್ಬಣಗೊಂಡ ಹಿನ್ನಲೆಯಲ್ಲಿ ಏಪ್ರಿಲ್ 19ರಿಂದ ದೆಹಲಿಯಲ್ಲಿ ಲಾಕ್‌ಡೌನ್ ವಿಧಿಸಲಾಯಿತು. ಮೇ 31ರಂದು ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡುವುದರೊಂದಿಗೆ ಅನ್ಲಾಕ್ ಪ್ರಕ್ರಿಯೆ ಪ್ರಾರಂಭಿಸಿತ್ತು. ಕೋವಿಡ್ ಪರಿಸ್ಥಿತಿಯ ಸುಧಾರಣೆಯೊಂದಿಗೆ ಹಂತಹಂತವಾಗಿ ಅನೇಕ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.

ಮಾರುಕಟ್ಟೆಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಬಾರ್‌ಗಳು, ಸಾರ್ವಜನಿಕ ಉದ್ಯಾನವನಗಳು ಮತ್ತು ಉದ್ಯಾನವನಗಳಲ್ಲಿ ಕೋವಿಡ್-ಸೂಕ್ತವಾದ ನಿಯಮ ಮತ್ತು ಇತರ ಮಾರ್ಗಸೂಚಿಗಳನ್ನು ಖಾತರಿಪಡಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಡಿಸಿಪಿಗಳು, ಪುರಸಭೆಯ ಉಪ ಆಯುಕ್ತರು ಮತ್ತು ಇತರ ಅಧಿಕಾರಿಗಳು, ಮಾರುಕಟ್ಟೆ ಮತ್ತು ನಿವಾಸಿ ಕಲ್ಯಾಣ ಸಂಘಗಳು ವಹಿಸಲಿವೆ. ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆಯಾಗದರೆ ಅಂತಹವರ ವಿರುದ್ಧ ದಂಡ/ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಡಿಡಿಎಂಎ ಎಚ್ಚರಿಸಿದೆ.

ಮದುವೆ ಮಂಟಪ ಅಥವಾ ಮನೆಯಲ್ಲಿ ಮದುವೆ ನಡೆದರೆ ಗರಿಷ್ಠ 20 ಮಂದಿ ಹಾಗೂ ಅಂತ್ಯಕ್ರಿಯೆಗೂ 20 ಮಂದಿಗೆ ಮಾತ್ರ ಅವಕಾಶ. 50 ಪ್ರತಿಶತ ಸಿಬ್ಬಂದಿಯೊಂದಿಗೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಕಾರ್ಯಚಟುವಟಿಕೆಗಳು, ದೆಹಲಿ ಮೆಟ್ರೋ ರೈಲುಗಳ ಕಾರ್ಯಾಚರಣೆ, 50 ಪ್ರತಿಶತ ಸಾಮರ್ಥ್ಯದೊಂದಿಗೆ ಸಾರ್ವಜನಿಕ ಸಾರಿಗೆ ಬಸ್‌ಗಳ ಸೇವೆ ಮುಂದುವರಿಯುತ್ತದೆ ಡಿಡಿಎಂಎ ಆದೇಶದಲ್ಲಿ ಸೇರಿಸಲಾಗಿದೆ.

SCROLL FOR NEXT