ದೇಶ

ಚುನಾವಣೆಯಲ್ಲಿ ಏಕಾಂಗಿ ಹೋರಾಟದ ಘೋಷಣೆ: ಕಾಂಗ್ರೆಸ್ ನಿರ್ಧಾರವನ್ನು ಟೀಕಿಸಿದ 'ಮಹಾ' ಸಿಎಂ ಉದ್ಧವ್ ಠಾಕ್ರೆ 

Sumana Upadhyaya

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮಹಾ ವಿಕಾಸ್ ಅಘಡಿ ಎಂದು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದವು. ಆದರೆ ನಿನ್ನೆ ಶಿವಸೇನೆಯ 55ನೇ ವರ್ಷಾಚರಣೆ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ವೇಳೆ ಸಿಎಂ ಉದ್ಧವ್ ಠಾಕ್ರೆ ಕಾಂಗ್ರೆಸ್ ಬಗ್ಗೆ ಹೇಳಿರುವ ಮಾತು ಚರ್ಚೆಯ ವಿಷಯವಾಗಿದೆ.

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಡಿ ಸರ್ಕಾರವನ್ನು ಬೆಂಬಲಿಸಿದರೂ ಕೂಡ ಮುಂದಿನ ಚುನಾವಣೆಯಲ್ಲಿ ಶಿವಸೇನೆ ಹಾಗೂ ಎನ್ ಸಿಪಿಯೊಂದಿಗೆ ಪಕ್ಷ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಉದ್ಧವ್ ಠಾಕ್ರೆ, ಇದು ರಾಜಕೀಯ ಮಾಡುವ ಸಮಯವಲ್ಲ, ರಾಜ್ಯದಲ್ಲಿ ಕೊರೋನಾ ಸೋಂಕಿನ ನಿರ್ಮೂಲನಕ್ಕೆ ಹೋರಾಡುವ ಸಮಯ ಎಂದು ಹೇಳಿದ್ದಾರೆ.

ಈಗ ಏಕಾಂಗಿಯಾಗಿ ಚುನಾವಣೆ ಎದುರಿಸುವ ಬಗ್ಗೆ ಮಾತನಾಡಿದರೆ ರಾಜ್ಯದ ಜನ ನಗುತ್ತಾರೆ. ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಾಧ್ಯವಾದಷ್ಟು ಸೀಟುಗಳನ್ನು ಗೆಲ್ಲಲು ಯಾವ ಪಕ್ಷ ಇಚ್ಛಿಸುವುದಿಲ್ಲ ಹೇಳಿ, ಆದರೆ ಅದನ್ನೆಲ್ಲ ಮಾತನಾಡಲು ಇದು ಸಮಯವಲ್ಲ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಅದರ ರಾಜ್ಯಾಧ್ಯಕ್ಷ ನಾನಾ ಪಟೊಲೆ ಹೇಳಿದರೆ, ಎನ್ ಸಿಪಿ ಮತ್ತು ಶಿವಸೇನೆ ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಹೇಳಿವೆ. ಪ್ರತಿ ಪಕ್ಷವು ತನ್ನ ಕಾರ್ಯದಲ್ಲಿ ಹೆಮ್ಮೆ ಪಡಬೇಕು, ಆದರೆ ಅದು ಇತರರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿರಬಾರದು, ಪ್ರತಿಯೊಂದು ಪಕ್ಷವೂ ವಿಸ್ತರಿಸಬೇಕಿದೆ, ಆದರೆ ನಾವು ಸಾರ್ವಕಾಲಿಕ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

SCROLL FOR NEXT