ದೇಶ

ಕಾಶ್ಮೀರ ನಾಯಕರ ಜೊತೆ ಸಭೆ ಕರೆದ ಪ್ರಧಾನಿ ಮೋದಿ: ಆಹ್ವಾನ ದೊರೆತಿದ್ದು, ಈ ಕುರಿತು ಚರ್ಚೆ ನಡೆಯುತ್ತಿದೆ- ಮೆಹಬೂಬಾ ಮುಫ್ತಿ

Manjula VN

ನವದೆಹಲಿ: ಸಭೆಯಲ್ಲಿ ಭಾಗವಿಸುವಂತೆ ಆಹ್ವಾನ ದೊರೆತಿದ್ದು, ಸಭೆಯಲ್ಲಿ ಭಾಗವಹಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಭಾನುವಾರ ಹೇಳಿದ್ದಾರೆ. 

ಜೂನ್ 24 ರಂದು ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ 14 ಪ್ರಮುಖ ರಾಜಕೀಯ ನಾಯಕರ ಜೊತೆ ದೆಹಲಿಯಲ್ಲಿ ಸಭೆಯನ್ನು ಕರೆದಿದ್ದಾರೆ. 

ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಸುವುದೂ ಸೇರಿದಂತೆ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರದ ಇತರ ಕೆಲವು ನಾಯಕರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ ಮುಫ್ತಿ ಅವರು, ಜೂನ್ 24ರ ಸಭೆಗೆ ಆಹ್ವಾನ ದೊರೆತಿದೆ. ಸಭೆಯಲ್ಲಿ ಭಾಗವಹಿಸುವ ಕುರಿತು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ಪಕ್ಷದ ಸದಸ್ಯರ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿಯವರು ಸಭೆ ಕರೆದ ಬೆನ್ನಲ್ಲೇ ನಿನ್ನೆಯಷ್ಟೇ ಆರು ತಿಂಗಳುಗಳಿಂದ ಬಂಧನದಲ್ಲಿ ಪಿಡಿಪಿ ಮುಖಂಡ ಸರ್ತಾಜ್ ಮದ್ನಿ ಅವರನ್ನು ಬಿಡುಗಡೆ ಮಾಡಲಾಗಿತ್ತು. 

ಪಿಡಿಪಿಯ ಮಾಜಿ ಉಪಾಧ್ಯಕ್ಷ ಹಾಗೂ ಮೆಹಬೂಬಾ ಮುಫ್ತಿ ಅವರ ಸೋದರ ಮಾವನಾಗಿರುವ ಸರ್ಜಾತ್ ಮದ್ನಿ ಅವರನ್ನು ಜಮ್ಮು-ಕಾಶ್ಮೀರದ ಡಿಡಿಸಿ ಚುನಾವಣೆ ಮತ ಎಣಿಕೆಗೂ ಒಂದು ದಿನ ಮುನ್ನ ಕಳೆದ ವರ್ಷ ಡಿಸೆಂಬರ್ 21 ರಂದು ಪೊಲೀಸರು ಬಂಧಿಸಿದ್ದರು. 

2019 ಆಗಸ್ಟ್ 5 ರಂದು ಸಂವಿಧಾನದ 370ನೇ ರದ್ಧುಗೊಳಿಸಿ ಜಮ್ಮು-ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ಮದ್ನಿ ಸೇರಿದಂತೆ  ಹಲವು ಮುಂಚೂಣಿ ನಾಯಕರನ್ನು ಬಂಧಿಸಲಾಗಿತ್ತು.

ಮೆಹಬೂಬಾ ಮುಫ್ತಿ, ಫಾರೂಖ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ, ಮದ್ನಿ ಸೇರಿದಂತೆ ಒಂದು ಡಜನ್ ನಾಯಕರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆದಾಗ್ಯೂ, ಕಳೆದ ವರ್ಷ ಜೂನ್ ನಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಮದ್ನಿ ಬಂಧನವನ್ನು ರದ್ದುಪಡಿಸಲಾಗಿತ್ತು. 

ಜೂನ್ 24 ರಂದು ಜಮ್ಮು- ಕಾಶ್ಮೀರ ಕುರಿತಂತೆ ಮಾತುಕತೆಗಾಗಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಮಾತುಕತೆಗಾಗಿ ಕೇಂದ್ರ ಸರ್ಕಾರ ನವದೆಹಲಿಗೆ ಕರೆದ ನಂತರ ಮದ್ನಿಯನ್ನು ಬಂಧನದಿಂದ ಬಿಡುಗಡೆ ಮಾಡಲಾಗಿದೆ.

SCROLL FOR NEXT