ದೇಶ

ತೃತೀಯ ಅಥವಾ ನಾಲ್ಕನೇ ರಂಗ ಬಿಜೆಪಿಗೆ ಸವಾಲಾಗಬಹುದು ಎಂದು ನನಗನ್ನಿಸುವುದಿಲ್ಲ: ಪ್ರಶಾಂತ್ ಕಿಶೋರ್

Srinivasamurthy VN

ಮುಂಬೈ: ಮುಂಬರುವ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ ತೃತೀಯ ಅಥವಾ ನಾಲ್ಕನೇ ರಂಗಗಳು ಸವಾಲಾಗಬಹುದು ಎಂದು ನನಗನ್ನಿಸುವುದಿಲ್ಲ ಎಂದು ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆ ವಿಚಾರವಾಗಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಪ್ರಶಾಂತ್ ಕಿಶೋರ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೃತೀಯ ಅಥವಾ ನಾಲ್ಕನೇ ರಂಗವು ಭಾರತೀಯ ಜನತಾ ಪಕ್ಷಕ್ಕೆ ಸವಾಲೊಡ್ಡುವ ಸಾಧ್ಯತೆಯನ್ನು ತಳ್ಳಿಹಾಕಿದರು. ಬಿಜೆಪಿ ವಿರುದ್ಧ ವಿರೋಧ  ಪಕ್ಷಗಳು ರಾಷ್ಟ್ರೀಯ ಒಕ್ಕೂಟವನ್ನು ರಚಿಸಲಿವೆ ಎಂಬ ಊಹಾಪೋಹಗಳ ನಡುವೆ ಪ್ರಶಾಂತ್ ಕಿಶೋರ್ ಅವರ ಈ ಹೇಳಿಕೆ ಇದೀಗ ರಾಜಕೀಯವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದೇ ವಿಚಾರವಾಗಿ ಮಾತನಾಡಿರುವ ಪ್ರಶಾಂತ್ ಕಿಶೋರ್, 'ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ರಾಷ್ಟ್ರೀಯ ಒಕ್ಕೂಟವನ್ನು ರಚಿಸಲಿವೆ ಎಂಬ ಬಗ್ಗೆ ಮಾತುಗಳನ್ನು ಕೇಳಿದ್ದೇನೆ. ಆದರೆ ಅಂತಹ ಒಂದು ಒಕ್ಕೂಟವು ಬಿಜೆಪಿಗೆ ಸವಾಲೊಡ್ಡಲು ಸಾಧ್ಯವಾಗುತ್ತದೆ ಎಂದು ನನಗನಿಸುತ್ತಿಲ್ಲ. ಯಾವುದೇ ಮೂರನೇ ಅಥವಾ  ನಾಲ್ಕನೇ ರಂಗವು ನರೇಂದ್ರ ಮೋದಿಯವರನ್ನು ಸೋಲಿಸಬಹುದೆಂದು ನಾನು ನಂಬುವುದಿಲ್ಲ. ಹಾಗಾಗಿ ನಾನೇಕೆ ಅಂತಹ ಯಾವುದೇ ಒಕ್ಕೂಟದ ಭಾಗವಾಗಿರಬೇಕು? ಎಂದು ಹೇಳಿದ್ದಾರೆ.

ಅಲ್ಲದೆ 15 ಜನರು ಸಭೆಯಲ್ಲಿ ಭಾಗವಹಿಸುತ್ತಾರೆ ಎಂದರೆ ನೀವು ಅದನ್ನು 15 ಪಕ್ಷಗಳ ಸಭೆ ಎಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿರುವ ಪ್ರಶಾಂತ್ ಕಿಶೋರ್, 'ನಾನು ಇತ್ತೀಚೆಗೆ ಮುಂಬೈನಲ್ಲಿದ್ದಾಗ ಶರದ್ ಪವಾರ್ ಅವರೊಂದಿಗೆ ಊಟ ಮಾಡಿದೆವು ಮತ್ತು ಇಂದು ಅವರು ನನ್ನನ್ನು ಕರೆದು ಚಹಾಕ್ಕಾಗಿ  ಬರಲು ಹೇಳಿದರು. ಇದು ಕೇವಲ ಚಿಟ್-ಚಾಟ್ ಮತ್ತು ವಾಡಿಕೆಯ ಸಭೆಯಷ್ಟೇ. ಎನ್‌ಸಿಪಿಯನ್ನು ಕ್ಲೈಂಟ್ (ಗ್ರಾಹಕ) ಆಗಿ ತೆಗೆದುಕೊಳ್ಳಲಾಗುತ್ತಿದೆ ಎಂಬ ಊಹಾಪೋಹವನ್ನೂ ಅವರು ತಳ್ಳಿಹಾಕಿದರು.

'ನಾನು ಮೇ 2 ರಂದು ಘೋಷಿಸಿದಂತೆ ಈ ಜಾಗವನ್ನು (ಚುನಾವಣಾ ತಂತ್ರಜ್ಞ) ತೊರೆದ ಕಾರಣ ಪವಾರ್ ಅವರು ನನ್ನ ಕ್ಲೈಂಟ್ ಆಗುವ ಪ್ರಶ್ನೆಯೇ ಇಲ್ಲ ಎಂದು ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದರು.

SCROLL FOR NEXT