ದೇಶ

ದೇಶದಲ್ಲಿ 40 ಕೋವಿಡ್-19 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪ್ರಕರಣ ವರದಿ; ಕರ್ನಾಟಕದಲ್ಲೇ ಎರಡು ಪ್ರಕರಣ!

Srinivasamurthy VN

ನವದೆಹಲಿ: ಕರ್ನಾಟಕದಲ್ಲಿ 2 ಪ್ರಕರಣ ಸೇರಿದಂತೆ ದೇಶಾದ್ಯಂತ ಮಾರಕ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿಯ 40 ಸೋಂಕು ಪ್ರಕರಣಗಳು ವರದಿಯಾಗಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ದೇಶಾದ್ಯಂತ ಒಟ್ಟು 40 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪ್ರಕರಣಗಳು ವರದಿಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 21 ಪ್ರಕರಣಗಳು ವರದಿಯಾಗಿದ್ದು, ನಂತರದ ಸ್ಥಾನದಲ್ಲಿರುವ ಮಧ್ಯ ಪ್ರದೇಶದಲ್ಲಿ 6, ಕೇರಳ ಮತ್ತು  ತಮಿಳುನಾಡಿನಲ್ಲಿ ತಲಾ 3 ಪ್ರಕರಣಗಳು ವರದಿಯಾಗಿವೆ.

ಉಳಿದಂತೆ ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಸೇರಿದಂತೆ  ಕರ್ನಾಟಕದವಲ್ಲಿ ಎರಡು ಪ್ರಕರಣಗಳು ವರದಿಯಾಗಿದ್ದು, ಪಂಜಾಬ್, ಆಂಧ್ರಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಪ್ರಕರಣ ವರದಿಯಾಗಿವೆ.

ಈ ಹಿಂದೆ ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ 2ನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿ ಸೋಂಕು ಪ್ರಭಾವ ಇದೀಗ ಕಡಿಮೆಯಾಗುತ್ತಿದ್ದು, ದೇಶದಲ್ಲಿ ನಿಧಾನಗತಿಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಕುಸಿತವಾಗುತ್ತಿದೆ. ಆದರೆ ದಿನ ಕಳೆದಂತೆ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪ್ರಕರಣಗಳ ಸಂಖ್ಯೆ  ಹೆಚ್ಚಾಗುತ್ತಿರುವುದು ದೇಶದಲ್ಲಿ 3ನೇ ಅಲೆಯ ಭೀತಿ ಹೆಚ್ಚಿಸಿದೆ.  

ದೇಹದ ರೋಗ ನಿರೋಧ ಶಕ್ತಿ ಮತ್ತು ಪ್ರತಿಕಾಯಗಳ ಸಾಮರ್ಥ್ಯವನ್ನೇ ಹೊಡೆದು ಹಾಕುವ ಸರ್ವನಾಶಿ
ಇನ್ನು ತಜ್ಞರು ಅಭಿಪ್ರಾಯಪಟ್ಟಿರುವಂತೆ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು, ಲಸಿಕೆ ಹಾಗೂ ಕೋವಿಡ್‌ನಿಂದಾಗಿ ಮನುಷ್ಯನು ಪಡೆದ ಪ್ರತಿಕಾಯದ ಶಕ್ತಿಯನ್ನೂ ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಡೆಲ್ಟಾ ಪ್ಲಸ್‌(ಎವೈ.1 ರೂಪಾಂತರಿ ಅಥವಾ ಬಿ.1.617.2.1) ಅನ್ನು ಕೊರೊನಾದ ಅತ್ಯಂತ  ಅಪಾಯಕಾರಿ ಸ್ವರೂಪ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ. ಈಗಾಗಲೇ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶಗಳಲ್ಲಿ ಈ ರೂಪಾಂತರಿಯು ಸದ್ದು ಮಾಡಲಾರಂಭಿಸಿದೆ.

ರೋಗ ನಿರೋಧಕ ಶಕ್ತಿಗೇ ಸಡ್ಡು
ಲಸಿಕೆಯಿಂದ ಪಡೆದಿರುವ ಹಾಗೂ ಸೋಂಕಿನಿಂದ ಚೇತರಿಸಿಕೊಂಡು ಗಳಿಸಿಕೊಂಡಿರುವ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸುವಷ್ಟು ಬಲಶಾಲಿಯಾಗಿದೆ ಈ ಡೆಲ್ಟಾ ಪ್ಲಸ್‌. ಈ ರೂಪಾಂತರಿಯು ಅಸಲಿ ಡೆಲ್ಟಾ ರೂಪಾಂತರಿಯ ಎಲ್ಲ ಗುಣವಿಶೇಷಗಳನ್ನೂ ಹೊಂದಿದೆ ಮಾತ್ರವಲ್ಲದೇ, ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ  ಬೀಟಾ ರೂಪಾಂತರಿಯ ಲಕ್ಷಣಗಳನ್ನೂ ಹೊಂದಿದೆ. ಇದರಿಂದಾಗಿಯೇ ಇದು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಹಿಂದೆ ಆಸ್ಟ್ರಾಜೆನೆಕಾ ಲಸಿಕೆಗಳನ್ನು ದ.ಆಫ್ರಿಕಾಗೆ ಒಯ್ದಾಗ, ಇದು ಅಲ್ಲಿರುವ ರೂಪಾಂತರಿಗೆ ಒಗ್ಗುವುದಿಲ್ಲ ಎಂದು ಹೇಳಿ ಲಸಿಕೆಗಳನ್ನು ಅಲ್ಲಿನ ಸರ್ಕಾರ ವಾಪಸ್‌ ಕಳುಹಿಸಿತ್ತು.

3ನೇ ಅಲೆಗೆ ನಂಟು?
ಅದನ್ನು ಈಗಲೇ ಹೇಳಲಾಗದು ಎನ್ನುತ್ತಾರೆ ದೇಶದ ಖ್ಯಾತ ವೈರಾಲಜಿಸ್ಟ್‌ ಪ್ರೊ ಶಾಹಿದ್‌ ಜಮೀಲ್‌. ಆದರೆ 2ನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ವ್ಯಾಪಿಸಿದ ವೇಗ ನೋಡಿದರೆ, 3ನೇ ಅಲೆಯಲ್ಲಿ ಡೆಲ್ಟಾ ಪ್ಲಸ್‌ ಕೂಡ ವ್ಯಾಪಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ನಾವು ಎಚ್ಚರಿಕೆ ವಹಿಸುವುದು ಸೂಕ್ತ  ಎಂದು ಅವರು ಹೇಳಿದ್ದಾರೆ.
 

SCROLL FOR NEXT