ದೇಶ

ಲಸಿಕೆ ಅಂತಾರಾಷ್ಟ್ರೀಯತೆಯನ್ನು ಉತ್ತೇಜಿಸಲು ಹೊಸ ಅಂತರರಾಷ್ಟ್ರೀಯ ಆರೋಗ್ಯ ಕ್ರಮ: ಪ್ರೋಗ್ರೆಸ್ಸಿವ್ ಇಂಟರ್ನ್ಯಾಷನಲ್

Srinivas Rao BV

ನವದೆಹಲಿ: ಪ್ರೋಗ್ರೆಸ್ಸಿವ್ ಇಂಟರ್ನ್ಯಾಷನಲ್ ಲಸಿಕೆ ಅಂತಾರಾಷ್ಟ್ರೀಯತೆಗಾಗಿ ಆಯೋಜಿಸಿದ್ದ ನಾಲ್ಕು ದಿನಗಳು ನಡೆದ ಶೃಂಗಸಭೆ ಜೂ.21 ರಂದು ಮುಕ್ತಾಯಗೊಂಡಿದ್ದು, ಹೊಸ ಅಂತಾರಾಷ್ಟ್ರೀಯ ಆರೋಗ್ಯ ಕ್ರಮ ರೂಪಿಸಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ ಘೋಷಿಸಿದೆ.   

ಶೃಂಗಸಭೆಯಲ್ಲಿ ಅರ್ಜೆಂಟೀನಾ, ಮೆಕ್ಸಿಕೋ, ಬೋಲಿವಿಯಾ, ಕ್ಯೂಬಾ ಹಾಗೂ ವೆನಿಜ್ಯುವೆಲಾದ ಸರ್ಕಾರಗಳು, ಭಾರತದ ಕೇರಳ ರಾಜ್ಯ ಸರ್ಕಾರ, ಕೀನ್ಯಾದ ಕಿಸುಮು ಸರ್ಕಾರದ ಪ್ರತಿನಿಧಿಗಳು, 20 ರಾಷ್ಟ್ರಗಳ ರಾಜಕೀಯ ನೇತಾರರು, ಆರೋಗ್ಯ ಕಾರ್ಯಕರ್ತರು, ಲಸಿಕೆ ಉತ್ಪಾದಕರು, ಸಾರ್ವಜನಿಕ ಆರೋಗ್ಯ ತಜ್ಞರು  ಶೃಂಗಸಭೆಯಲ್ಲಿ ಭಾಗಿಯಾಗಿದ್ದು ಲಸಿಕೆ ಅಂತಾರಾಷ್ಟ್ರೀಯತೆಯನ್ನು ಮುಂದುವರೆಸುವ ಬದ್ಧತೆಗೆ ಸಂಕಲ್ಪಿಸಿದ್ದಾರೆ. 

ಲಸಿಕೆ ಪೂರೈಕೆಯಲ್ಲಿ ಉಂಟಾಗುತ್ತಿರುವ ತಾರತಮ್ಯ ಉಂಟಾಗುತ್ತಿರುವುದಕ್ಕೆ ತ್ವರಿತ ಪ್ರಕ್ರಿಯೆ ನೀಡುವ ನಿಟ್ಟಿನಲ್ಲಿ ಈ ಸಭೆ ನಡೆದಿದೆ. ಶೇ.85 ರಷ್ಟು ಲಸಿಕೆಗಳನ್ನು ವಿಶ್ವಾದ್ಯಂತ ಇರುವ ಹೆಚ್ಚು ಅಥವಾ ಮಧ್ಯಮ ಎನ್ನುವುದಕ್ಕಿಂತ ಹೆಚ್ಚು ಆದಾಯ ಹೊಂದಿರುವ ರಾಷ್ಟ್ರಗಳಿಗೆ ಲಭ್ಯವಾಗಿದೆ. ಕೇವಲ 0.3 ರಷ್ಟು ಲಸಿಕೆ ಡೋಸ್ ಗಳು ಮಾತ್ರವೇ ಕಡಿಮೆ ಆದಾಯ ಇರುವ ರಾಷ್ಟ್ರಗಳಿಗೆ ತಲುಪಿದೆ. ಈ ರೀತಿಯ ಪರಿಸ್ಥಿತಿಯಲ್ಲಿ ಕಡಿಮೆ ಆದಾಯವಿರುವ ರಾಷ್ಟ್ರಗಳಲ್ಲಿ ಕೋವಿಡ್-19 ಸಂಕಷ್ಟ ಹೀಗೆಯೇ ಮುಂದುವರೆಯಲಿದ್ದು, ಇಡೀ ವಿಶ್ವವನ್ನು ಇನ್ನೂ 57 ವರ್ಷಗಳ ಕಾಲ ದುರ್ಬಲಗೊಳಿಸಲಿದೆ. 

ಲಸಿಕೆ ಉತ್ಪಾದನೆ ಹಾಗೂ ವಿತರಣೆಯನ್ನು ವೇಗಗೊಳಿಸುವುದಕ್ಕೆ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಹೀಗಿವೆ... 

  1. ಕೋವಿಡ್-19 ಲಸಿಕೆ ತಂತ್ರಜ್ಞಾನಗಳಿಗೆ ಮುಕ್ತ ಸಹಯೋಗ
  2. ಕೋವಿಡ್-19 ಲಸಿಕೆಗಳಿಗೆ ಐಕ್ಯಮತ ಬೆಲೆಗಳು
  3. ದೇಶೀಯ ಬಳಕೆಗಾಗಿ ಕೋವಿಡ್ -19 ಲಸಿಕೆಗಳನ್ನು ಅನುಮೋದಿಸಲು ನಿಯಂತ್ರಕ ಸಾಮರ್ಥ್ಯದ ಹಂಚಿಕೆ
  4. ಲಸಿಕೆ ಮತ್ತು ವೈದ್ಯಕೀಯ ಸಲಕರಣೆಗಳ ಉತ್ಪಾದನೆಯನ್ನು ಹೆಚ್ಚಿಸಲು ಉತ್ಪಾದನಾ ಸಾಮರ್ಥ್ಯವನ್ನು ಸಂಗ್ರಹಿಸುವುದು
  5. ದೊಡ್ಡ ಫಾರ್ಮಾ ಕಂಪನಿಗಳ ಏಕಸ್ವಾಮ್ಯವನ್ನು ಎದುರಿಸಲು ಸಾಮೂಹಿಕ ಅಸಹಕಾರ

ಈ ಬಗ್ಗೆ ಮಾಹಿತಿ ನೀಡಿರುವ ಸಭೆಯ ಆಯೋಜಕರು, ಪ್ರೋಗ್ರೆಸ್ಸಿವ್ ಇಂಟರ್ನ್ಯಾಷನಲ್ ನ ಸದಸ್ಯರೂ ಆಗಿರುವ ವರ್ಷ ಗಂಡಿಕೋಟಾ ನೆಲ್ಲುಟ್ಲಾ "ಲಸಿಕೆ ರಾಷ್ಟ್ರೀಯತೆಯಿಂದ ಅಂತಾರಾಷ್ಟ್ರೀಯತೆಗೆ, ಪೈಪೋಟಿಯಿಂದ ಸಹಕಾರದೆಡೆಗೆ ನಡೆಯುವುದಕ್ಕೆ ಸರ್ಕಾರಗಳು, ಸಂಸ್ಥೆಗಳು, ಕಂಪನಿಗಳು, ಜನತೆಯಿಂದ ಸಂಘಟಿತ ಪ್ರಯತ್ನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಡೆಯುವುದಕ್ಕೆ ಶೃಂಗಸಭೆಯಲ್ಲಿ ಮೊದಲ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ಕ್ರಮಗಳನ್ನು ಜಾರಿಗೆ ತರುವುದಕ್ಕಾಗಿ ಪ್ರೋಗ್ರೆಸ್ಸಿವ್ ಇಂಟರ್ನ್ಯಾಷನಲ್ ಮತ್ತಷ್ಟು ಸಭೆಗಳನ್ನು ಆಯೋಜಿಸಲಿದೆ ಎಂದು ಗಂಡಿಕೋಟಾ ತಿಳಿಸಿದ್ದಾರೆ. 

SCROLL FOR NEXT