ದೇಶ

ಪ್ರಧಾನಿ ಮೋದಿಯೊಂದಿಗೆ ಸರ್ವಪಕ್ಷ ಸಭೆ: ಜಮ್ಮು-ಕಾಶ್ಮೀರದ 14 ಪ್ರಮುಖ ನಾಯಕರು ಭಾಗಿ

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ನಡೆಯಲಿರುವ ಮಹತ್ವದ ಸಭೆಯಲ್ಲಿ ಜಮ್ಮು-ಕಾಶ್ಮೀರದ ಸುಮಾರು 14 ಮಂದಿ ರಾಜಕೀಯ ನಾಯಕರು ಭಾಗವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ನಂತರ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರದ ನಾಯಕರ ನಡುವೆ ನಡೆಯುತ್ತಿರುವ ಮೊದಲ ಉನ್ನತ ಮಟ್ಟದ ಮಾತುಕತೆ ಇದಾಗಿದೆ.

ಸಭೆಯಲ್ಲಿ ಭಾಗವಹಿಸಲಿರುವ ನಾಯಕರಲ್ಲಿ ಕಾಂಗ್ರೆಸ್ ನ ಗುಲಾಮ್ ನಬಿ ಆಜಾದ್, ತಾರಾ ಚಂದ್ ಮತ್ತು ಜಿ.ಎ.ಮಿರ್, ರಾಷ್ಟ್ರೀಯ ಸಮ್ಮೇಳನದ ಡಾ.ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಜೆ-ಕೆ ಅಪ್ನಿ ಪಕ್ಷದ ಅಲ್ತಾಫ್ ಬುಖಾರಿ, ಬಿಜೆಪಿಯ ರವೀಂದರ್ ರೈನಾ, ನಿರ್ಮಲ್ ಸಿಂಗ್ ಮತ್ತು ಕವಿಂದರ್ ಗುಪ್ತಾ, ಸಿಪಿಐ (ಎಂ) ನ ಎಂ ವೈ ತರಿಗಮಿ, ನ್ಯಾಷನಲ್ ಪ್ಯಾಂಥರ್ಸ್ ಪಕ್ಷದ ಪ್ರೊಫೆಸರ್ ಭೀಮ್ ಸಿಂಗ್ ಮತ್ತು ಪೀಪಲ್ಸ್ ಕಾನ್ಫರೆನ್ಸ್‌ನ ಸಜಾದ್ ಗಣಿ ಲೋನ್ ಒಳಗೊಂಡಿದ್ದಾರೆ.

ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಗೃಹ ಕಾರ್ಯದರ್ಶಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಲು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥ ಮೆಹಬೂಬಾ ಮುಫ್ತಿ ಮತ್ತು ಬಿಜೆಪಿ ಮುಖಂಡರಾದ ರವೀಂದರ್ ರೈನಾ ಮತ್ತು ಕವಿಂದರ್ ಗುಪ್ತಾ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖಂಡರು ಈಗಾಗಲೇ ದೆಹಲಿಗೆ ಆಗಮಿಸಿದ್ದಾರೆ.

ಇಂದಿನ ಸಭೆಯಲ್ಲಿ ಯಾವೆಲ್ಲಾ ಅಂಶಗಳು ಚರ್ಚೆಗೆ ಬರಲಿವೆ, ಯಾವ ಅಜೆಂಡಾ ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿಲ್ಲ. 

SCROLL FOR NEXT