ದೇಶ

1,750 ಭವಿಷ್ಯದ ಪದಾತಿ ಯುದ್ಧ ವಾಹನಗಳ ಖರೀದಿಗೆ ಸೇನೆಯಿಂದ ಪ್ರಕ್ರಿಯೆ ಪ್ರಾರಂಭ

Srinivas Rao BV

ನವದೆಹಲಿ: ಭಾರತೀಯ ಸೇನೆ ತನ್ನ ಪದಾತಿದಳಕ್ಕೆ ಹೆಚ್ಚಿನ ಚಲನಶೀಲತೆಯ ಭವಿಷ್ಯದ ಯುದ್ಧ ವಾಹನ(ಎಫ್ಐಸಿವಿ) ಗಳ ಖರೀದಿಗೆ ಭಾರತೀಯ ಸೇನೆ ಮಾಹಿತಿಗಾಗಿ ಮನವಿ (ಆರ್ ಎಫ್ಐ) ನ್ನು ಸಲ್ಲಿಸಿದೆ. 

ಈ ವಾಹನಗಳು ಮೇಕ್ ಇನ್ ಇಂಡಿಯಾದ ಯೋಜನೆಯಡಿ ತಯಾರಾಗಲಿದ್ದು, ಶತ್ರುಗಳ ದಾಳಿಯ ನಡುವೆಯೂ, ಪರ್ವತ ಪ್ರದೇಶಗಳಲ್ಲಿ ಸೇನಾ ಸಿಬ್ಬಂದಿಗಳ ಸಾಗಣೆಗೆ ಹೆಚ್ಚಿನ ವೇಗ ತರಲಿದೆ. ಚಲನಶೀಲತೆಯ ಭವಿಷ್ಯದ ಯುದ್ಧ ವಾಹನಗಳನ್ನು ಎಲ್ಎಸಿಯಲ್ಲಿ ನಿಯೋಜನೆ ಮಾಡಲಾಗುವುದು ಎಂದು ಸೇನೆ ಮಾಹಿತಿ ನೀಡಿದೆ.

ಸಂಭಾವ್ಯ ತಯಾರಕರಿಂದ ವಾಹನಗಳ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಆರ್ ಎಫ್ಐ ಪ್ರಕ್ರಿಯೆಯನ್ನು ಬಳಕೆ ಮಾಡಲಾಗುತ್ತದೆ. ಭಾರತೀಯ ಸೇನೆಗೆ 1750 ವಾಹನಗಳು ಅಗತ್ಯವಿದ್ದು, ಟ್ಯಾಂಕ್ ನಿರೋಧಕ ಕ್ಷಿಪಣಿಗಳು ಹಾಗೂ ಪ್ರತಿ ವಾಹನಕ್ಕೂ ಪ್ರತ್ಯೇಕ ಗನ್ ಗಳಿರುವ ವ್ಯವಸ್ಥೆ ಇರಲಿದ್ದು, ಈ ಪೈಕಿ ಶೇ.55 ರಷ್ಟು ವಾಹನಗಳು ಗನ್ ಆವೃತ್ತಿಯದ್ದಾಗಿದ್ದರೆ ಉಳಿದವು ವಿಶೇಷ ವಾಹನಗಳಾಗಿರಲಿವೆ.

1980 ರ ಹಳೆಯ ಬಿಎಂಪಿ-2ಯ ಬದಲಿಗೆ ಎಫ್ಐಸಿವಿಗಳನ್ನು ಖರೀದಿಸಲಾಗುತ್ತಿದ್ದು, ಲಡಾಖ್, ಕೇಂದ್ರ, ಸಿಕ್ಕಿಂ ಸೆಕ್ಟರ್ ಗಳಲ್ಲಿನ ಎಲ್ಎಸಿಯಲ್ಲಿ ಈ ವಾಹನಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಸೇನೆ ಮಾಹಿತಿ ನೀಡಿದೆ.

ಅರೆಮರುಭೂಮಿ, ಮರುಭೂಮಿ, ಪರ್ವತ ಶ್ರೇಣಿಗಳ ನಡುವೆ ಸಂಚರಿಸುವ ಹಾಗೂ ನದಿ, ಹೊಳೆಗಳನ್ನು ದಾಟುವ ಸಾಮರ್ಥ್ಯಹೊಂದಿರುವುದಷ್ಟೇ ಅಲ್ಲದೇ ಈ ವಾಹನಗಳನ್ನು ರಾಸಾಯನಿಕ, ಜೈವಿಕ, ಪರಮಾಣು, ವಿಕಿರಣಗಳ ಪರಿಸರದಲ್ಲಿಯೂ ಕಾರ್ಯನಿರ್ವಹಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮೂರು-ಹಂತದಲ್ಲಿ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರತಿ ವರ್ಷಕ್ಕೆ 75-100 ವಾಹನಗಳನ್ನು ಪೂರೈಕೆ ಮಾಡುವುದಕ್ಕೆ ಭಾರತೀಯ ಮಾರಾಟಗಾರರು ವಿದೇಶಿ ಉಪಕರಣ ತಯಾರಕರ ಸಹಯೋಗದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಈ ಯೋಜನೆ 2009 ರಿಂದಲೂ ನೆನೆಗುದಿಗೆ ಬಿದ್ದಿತ್ತು.

SCROLL FOR NEXT