ದೇಶ

ಜಮ್ಮು ವಾಯುಪಡೆ ನೆಲೆ ಸ್ಫೋಟ ಪ್ರಕರಣ: ಯುಎಪಿಎ ಅಡಿಯಲ್ಲಿ ಎಫ್ಐಆರ್, ಎನ್ಐಎ ತನಿಖೆ ಸಾಧ್ಯತೆ!

Vishwanath S

ಜಮ್ಮು: ಜಮ್ಮು ವಿಮಾನ ನಿಲ್ದಾಣದಲ್ಲಿರುವ ಉನ್ನತ ಭದ್ರತೆಯ ಭಾರತೀಯ ವಾಯುಪಡೆಯ ನೆಲೆ ಮೇಲಿನ ಅವಳಿ ಸ್ಫೋಟ ಪ್ರಕರಣವನ್ನು ಯುಎಪಿಎ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು ಎನ್ಐಎ ತನಿಖೆ ನಡೆಸವ ಸಾಧ್ಯತೆ ಇದೆ. 

ಭಾನುವಾರ ಮುಂಜಾನೆ ಜಮ್ಮು ವಿಮಾನ ನಿಲ್ದಾಣದಲ್ಲಿರುವ ಐಎಎಫ್ ನೆಲೆ ಮೇಲೆ ಡ್ರೋನ್‌ಗಳು ದಾಳಿ ನಡೆಸಿದ್ದವು. ಬಹುಶಃ ಪಾಕಿಸ್ತಾನ ಮೂಲದ ಭಯೋತ್ಪಾದಕರು ಮಾನವರಹಿತ ಡ್ರೋನ್ ಗಳನ್ನು ದಾಳಿಗೆ ಬಳಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಎಎಫ್‌ನ ಕಿರಿಯ ವಾರಂಟ್ ಅಧಿಕಾರಿಯ ಅರ್ಜಿಯ ಮೇರೆಗೆ ಸತ್ವಾರಿ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು(ತಡೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ(ಐಪಿಸಿ) ಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್ಐಎ ಈ ಪ್ರಕರಣವನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ. ಸ್ಫೋಟದ ಬಳಿಕ ಘಟನಾ ಸ್ಥಳದಲ್ಲಿ ಅದಾಗಲೇ ತನಿಖೆಯನ್ನು ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು 'ಭಯೋತ್ಪಾದಕ ದಾಳಿ' ಎಂದು ಹೇಳಿದ್ದಾರೆ.

ಐಎಎಫ್ ಮತ್ತು ವಿಶೇಷ ಪಡೆಗಳ ತನಿಖಾ ತಂಡಗಳು ವಿಧಿವಿಜ್ಞಾನ ತಜ್ಞರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟದ ಸ್ವರೂಪದ ತನಿಖೆ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿವೆ ಎಂದು ಅವರು ಹೇಳಿದರು.

ಭಾನುವಾರ ಮುಂಜಾನೆ ಜಮ್ಮು ವಿಮಾನ ನಿಲ್ದಾಣದಲ್ಲಿರುವ ವಾಯುಪಡೆಯ ನಿಲ್ದಾಣದಲ್ಲಿ ಡ್ರೋನ್‌ನಿಂದ ದಾಳಿ ನಡೆಸಲಾಗಿತ್ತು. ಮೊದಲ ಸ್ಫೋಟ ಸತ್ವಾರಿ ಪ್ರದೇಶದಲ್ಲಿ ಐಎಎಫ್ ನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದ ಮೊದಲ ಅಂತಸ್ತಿನ ಕಟ್ಟಡದ ಮೇಲೆ ಬಿದ್ದು ಛಾವಣಿ ಧ್ವಂಸಗೊಂಡಿದೆ. ಎರಡನೆಯದು ನೆಲದ ಮೇಲೆ ಬಿದ್ದಿದೆ. 

SCROLL FOR NEXT