ದೇಶ

ಮುಂಬರುವ ಉತ್ತರಪ್ರದೇಶ, ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್'ಪಿಯಿಂದ ಏಕಾಂಗಿ ಸ್ಪರ್ಧೆ: ಮಾಯಾವತಿ ಸ್ಪಷ್ಟನೆ

Manjula VN

ಲಖನೌ: ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯದಲ್ಲಿ ಮುಂಬರುವ  ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಸ್ಪರ್ಧೆಗಿಳಿಯಲಿದೆ ಎಂದು ಬಿಎಸ್'ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯದಲ್ಲಿ ಮುಂಬರುವ  ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಸ್ಪರ್ಧೆಗಿಳಿಯಲಿದೆ. ಅಲ್ಲದೆ, ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳುವ ಸುದ್ದಿಗಳನ್ನು ಇದೇ ವೇಳೆ ತಳ್ಳಿಹಾಕಿದ್ದಾರೆ. 

ಪಂಜಾಬ್ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳದ ಜೊತೆ ಮಾತ್ರ ಮೈತ್ರಿ ಮಾಡಿಕೊಳ್ಳಲಿದೆ. ಇದನ್ನು ಹೊರತುಪಡಿಸಿ, ಇನ್ನು ಯಾವುದೇ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. 117 ವಿಧಾನಸಭಾ ಸ್ಥಾನಗಳಿರುವ ಪಂಜಾಬ್ ರಾಜ್ಯದಲ್ಲಿ ಈಗಾಗಲೇ ಸೀಟು ಹಂಚಿಕೆಯ ನಿರ್ಧಾರವಾಗಿದೆ. ಶಿರೋಮಣಿ ಅಕಾಲಿದಳ 97 ಮತ್ತು ಬಿಎಸ್'ಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದಿದ್ದಾರೆ. 

ಓವೈಸಿ ಪಕ್ಷದೊಂದಿಗೆ ಬಿಎಸ್'ಪಿ ಮುಂಬರುವ ಉತ್ತರಪ್ರದೇಶದ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿ ನಿನ್ನೆಯಿಂದಲೂ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಸುದ್ದಿ ಸತ್ಯಕ್ಕೆ ದೂರವಾದದ್ದು ಮತ್ತು ಆಧಾರರಹಿತವಾದದ್ದು ಎಂದು ಹೇಳಿದ್ದಾರೆ. 

ಈಗಾಗಲೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪಕ್ಷ ಸ್ಪಷ್ಟನೆ ನೀಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ ರಾಜ್ಯದಲ್ಲಿ ಹೊರತುಪಡಿಸಿದರೆ, ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಯಾವುದೇ ಪಕ್ಷದೊಂದಿಗೂ ಬಿಎಸ್'ಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

SCROLL FOR NEXT