ದೇಶ

ಪಂಜಾಬ್ ಚುನಾವಣೆಯಲ್ಲಿ ಎಎಪಿ ಗೆದ್ದರೆ ಪ್ರತಿ ಮನೆಗೆ 300 ಯುನಿಟ್ ಉಚಿತ ವಿದ್ಯುತ್: ಕೇಜ್ರಿವಾಲ್ ಘೋಷಣೆ

Vishwanath S

ಚಂಡೀಗಢ: ಮುಂದಿನ ವರ್ಷ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಪ್ರತಿ ಮನೆಗೆ ತಿಂಗಳಿಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ.

ಕೇಜ್ರಿವಾಲ್ ತಮ್ಮ ಪಕ್ಷ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ. ದೆಹಲಿಯಲ್ಲಿ ನಾವು ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಮಹಿಳೆಯರು ತುಂಬಾ ಸಂತೋಷವಾಗಿದ್ದಾರೆ. ಪಂಜಾಬ್‌ನ ಮಹಿಳೆಯರು ಸಹ ಹಣದುಬ್ಬರದ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದಾರೆ. ಎಎಪಿ ಸರ್ಕಾರವು ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ಸಹ ಒದಗಿಸುತ್ತದೆ ಎಂದು ಕೇಜ್ರಿವಾಲ್ ಚಂಡೀಗಢ ಭೇಟಿಗೂ ಒಂದು ದಿನ ಮುನ್ನ ಟ್ವೀಟ್ ಮಾಡಿದ್ದಾರೆ. 

ಟ್ವೀಟ್ ನಲ್ಲಿ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿರುವ ಅವರು ನಾಳೆ ಚಂಡೀಗಢದಲ್ಲಿ ನಿಮ್ಮನ್ನು ನೋಡುತ್ತೇನೆ ಪಂಜಾಬಿಯಲ್ಲಿ ಟ್ವೀಟ್ ಮಾಡಿದ್ದರು.

ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ. ಪಂಜಾಬ್ ವಿದ್ಯುತ್ ಉತ್ಪಾದಕ ರಾಜ್ಯವಾಗಿದ್ದರೂ ಅಲ್ಲಿ ವಿದ್ಯುತ್ 'ವೆಚ್ಚದಾಯಕ' ಎಂದು ಕೇಜ್ರಿವಾಲ್ ಹೇಳಿದರು. 'ನಾವು ದೆಹಲಿಯಲ್ಲಿ ವಿದ್ಯುತ್ ಉತ್ಪಾದಿಸುವುದಿಲ್ಲ. ನಾವು ಅದನ್ನು ಇತರ ರಾಜ್ಯಗಳಿಂದ ಖರೀದಿಸುತ್ತೇವೆ. ಅದರ ಹೊರತಾಗಿಯೂ ರಾಷ್ಟ್ರ ರಾಜಧಾನಿಯಲ್ಲಿ ಅಗ್ಗದ ದರಕ್ಕೆ ವಿತರಿಸುತ್ತೇವೆ ಎಂದರು. 

ಎಎಪಿಯ ಪಂಜಾಬ್ ಘಟಕದ ಮುಖ್ಯಸ್ಥ ಭಗವಂತ್ ಮನ್, ಪಕ್ಷದ ಪಂಜಾಬ್ ವ್ಯವಹಾರಗಳ ಅಧ್ಯಕ್ಷ ಜರ್ನೈಲ್ ಸಿಂಗ್, ಸಹ-ಉಸ್ತುವಾರಿ ರಾಘವ್ ಚಾಧಾ ಮತ್ತು ಶಾಸಕರಾದ ಹರ್ಪಾಲ್ ಸಿಂಗ್ ಚೀಮಾ ಸೇರಿದಂತೆ ರಾಜ್ಯ ನಾಯಕರು ಉಪಸ್ಥಿತರಿದ್ದರು.

SCROLL FOR NEXT