ದೇಶ

ಗಣ ರಾಜ್ಯೋತ್ಸವದಂದು ಹಿಂಸಾಚಾರ: ಸಾಮಾಜಿಕ ಹೋರಾಟಗಾರ, ನಟ ದೀಪ್ ಸಿಧು ಗೆ ಮತ್ತೆ ಸಮನ್ಸ್

Shilpa D

ನವದೆಹಲಿ: ಗಣ ರಾಜ್ಯೋತ್ಸವದಂದು ಕೆಂಪು ಕೋಟೆ ಹಿಂಸಾಚಾರ ಪ್ರಕರಣದ ಆರೋಪಿ ನಟ ಮತ್ತು ಸಾಮಾಜಿಕ ಹೋರಾಟಗಾರ ದೀಪ್ ಸಿಧು ಮತ್ತು ಇತರೆ ಆರೋಪಿಗಳಿಗೆ ದೆಹಲಿ ನ್ಯಾಯಾಲಯವು ಮಂಗಳವಾರ ಮತ್ತೆ ಸಮನ್ಸ್‌ ಜಾರಿ ಮಾಡಿದೆ. 

ಜುಲೈ 12 ರಂದು ಎಲ್ಲಾ ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಚೀಫ್‌ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗಜೇಂದ್ರ ಸಿಂಗ್  ನಿರ್ದೇಶಿಸಿದರು.

ಈ ಹಿಂದೆ ನ್ಯಾಯಾಲಯವು ಆರೋಪಿಗಳಿಗೆ ಮಂಗಳವಾರ (ಜೂನ್‌ 29) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿತ್ತು. ಆದರೆ ಕೇವಲ ಹರ್ಜೊತ್‌ ಸಿಂಗ್‌ ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾದರು. 

‘ನ್ಯಾಯಾಲಯ ಜಾರಿಗೊಳಿಸಿದ ಸಮನ್ಸ್‌ ಆರೋಪಿಗಳಿಗೆ ಸಿಕ್ಕಿಲ್ಲ. ಹಾಗಾಗಿ ಅವರು ವಿಚಾರಣೆಗೆ ಹಾಜರಾಗಿಲ್ಲ’ ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಕೋರ್ಟ್‌, ಮತ್ತೊಮ್ಮೆ ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸಲಾಯಿತು.

ಜನವರಿ 26ರಂದು ಪ್ರತಿಭಟನಾಕಾರರು ಟ್ರ್ಯಾಕ್ಟರ್ ರ್‍ಯಾಲಿಗೆ ತಾವು ಒಪ್ಪಿದ ಮಾರ್ಗಗಳನ್ನು ಬಿಟ್ಟು ದೆಹಲಿ ಪ್ರವೇಶಿಸಿದ್ದರು. ಕೆಂಪು ಕೋಟೆಗೆ ನುಗ್ಗಿ ದಾಂಧಲೆ ಮಾಡಿದ್ದರು. ರೈತರನ್ನು ದಾರಿ ತಪ್ಪಿಸಿ ಕೆಂಪುಕೋಟೆ ಕಡೆಗೆ ಕರೆದೊಯ್ದು ಘರ್ಷಣೆಗೆ ಕಾರಣವಾದ ಆರೋಪ ದೀಪ್ ಸಿಧು ಅವರ ಮೇಲಿದೆ. ಪದೇ ಪದೇ ಮನವಿ ಮಾಡಿದರೂ ಬಗ್ಗದ ಪ್ರತಿಭಟನಾಕಾರರು ಘರ್ಷಣೆಗೆ ಇಳಿದಿದ್ದರಿಂದ ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಲಾಠಿ ಚಾರ್ಜ್ ಮಾಡಿದ್ದರು.

SCROLL FOR NEXT