ದೇಶ

ಭಾರತಕ್ಕೆ ಬಂದ ಮೂರನೇ ಲಸಿಕೆ: ರಷ್ಯಾದಿಂದ 1.5 ಲಕ್ಷ ಡೋಸ್ ಸ್ಪುಟ್ನಿಕ್ ವಿ ಲಸಿಕೆಗಳ ರವಾನೆ

Srinivasamurthy VN

ಹೈದರಾಬಾದ್: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದ ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ಮೊದಲ ಬ್ಯಾಚ್ ನ ಸುಮಾರು 1.5 ಲಕ್ಷ ಡೋಸ್ ಲಸಿಕೆಗಳು ಇದೀಗ ಭಾರತಕ್ಕೆ ಬಂದಿಳಿದಿವೆ.

ಈ ಬಗ್ಗೆ ಸ್ಪುಟ್ನಿಕ್ ವಿ ಲಸಿಕೆಯ ಭಾರತದ ಉಸ್ತುವಾರಿ ವಹಿಸಿರುವ ಭಾರತದ ರೆಡ್ಡೀಸ್ ಲ್ಯಾಬೊರೇಟರೀಸ್ (ಡಿಆರ್‌ಎಲ್) ಮಾಹಿತಿ ನೀಡಿದ್ದು, 'ಕೋವಿಡ್‌–19 ವಿರುದ್ಧ ಹೋರಾಡುವ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ 1.5 ಲಕ್ಷ ಡೋಸ್‌ಗಳು ಭಾರತಕ್ಕೆ ಬಂದಿವೆ ಎಂದು ಹೇಳಿದೆ.

'ಭಾರತದಲ್ಲಿ ಈ ಲಸಿಕೆಯ ಬಳಕೆಗಾಗಿ ಡಿಆರ್‌ಎಲ್ ರಷ್ಯಾದಿಂದ 250 ಮಿಲಿಯನ್ ಡೋಸ್‌ಗಳನ್ನು ಆಮದು ಮಾಡಿಕೊಳ್ಳಲಿದೆ. ಇದರ ಮೊದಲ ಭಾಗವಾಗಿ ಶನಿವಾರ 1.5 ಲಕ್ಷ ಡೋಸ್‌ಗಳು ಭಾರತಕ್ಕೆ ತಲುಪಿವೆ. ಮುಂದಿನ ಕೆಲವು ವಾರಗಳಲ್ಲಿ ಉಳಿದ ಡೋಸ್‌ಗಳು ಬರಲಿವೆ. ಈಗ ಬಂದಿರುವ ಲಸಿಕೆಗಳನ್ನು  ದೊಡ್ಡಮಟ್ಟದ ಲಸಿಕಾ ಕಾರ್ಯಕ್ರಮದ ಭಾಗವಾಗಿ ನಮ್ಮ ಪೂರೈಕೆಯ ವಿವಿಧ ಜಾಲಗಳಲ್ಲಿ ಬಳಸಲಾಗುತ್ತದೆ ಎಂದು ಡಿಆರ್ ಎಲ್ ಮಾಹಿತಿ ನೀಡಿದೆ. 

ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಕೊರತೆಯ ಕಾರಣಕ್ಕಾಗಿ, ಸ್ಪುಟ್ನಿಕ್ ವಿ ಲಸಿಕೆಯನ್ನು ದೇಶದಲ್ಲಿ ತುರ್ತು ಬಳಕೆಗಾಗಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಅವರು ಕಳೆದ ತಿಂಗಳು ಅನುಮೋದನೆ ನೀಡಿದ್ದರು. ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಲಸಿಕೆಯ ಎರಡು ಡೋಸ್‌ಗಳು  ಕೋವಿಡ್ ವಿರುದ್ಧ ಶೇ 91.6ರಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಖ್ಯಾತ ವಿಜ್ಞಾನ ಪತ್ರಿಕೆ ಲ್ಯಾನ್ಸೆಟ್ ವರದಿ ಮಾಡಿತ್ತು. 

ಈ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ ಸೆಪ್ಟೆಂಬರ್‌ನಲ್ಲಿಯೇ ಡಿಆರ್‌ಎಲ್ ಒಪ್ಪಂದ ಮಾಡಿಕೊಂಡಿತ್ತು. ಡಿಆರ್‌ಎಲ್ ಇನ್ನು ಕೆಲವೇ ತಿಂಗಳುಗಳಲ್ಲಿ ಈ ಲಸಿಕೆಯನ್ನು ಭಾರತದೊಳಗೇ ಉತ್ಪಾದಿಸಿ ಮಾರಾಟ ಮಾಡಲಿದೆ. ಸ್ಪುಟ್ನಿಕ್ ಲಸಿಕೆಯನ್ನು ಮೈನಸ್  18ರಿಂದ ಮೈನಸ್ 22 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಿಡಬಹುದಾಗಿದೆ. ಸ್ಪುಟ್ನಿಕ್ ವಿ ಯ ಅಂತರರಾಷ್ಟ್ರೀಯ ಬೆಲೆ 10 ಅಮೆರಿಕ ಡಾಲರ್ ಆಗಿದ್ದು ಭಾರತೀಯ ರೂಪಾಯಿ ದರದಲ್ಲಿ ಇದು ಪ್ರತಿ ಡೋಸ್ ಗೆ ಸುಮಾರು 750 ರೂ. ಎಂದು ಅಂದಾಜಿಸಲಾಗಿದೆ.

SCROLL FOR NEXT