ದೇಶ

ಗುಜರಾತ್: ಬರೂಚ್ ನ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ದುರಂತ; 18 ರೋಗಿಗಳು ಸಜೀವ ದಹನ 

Sumana Upadhyaya

ಬರೂಚ್(ಗುಜರಾತ್): ದೇಶದ ಅಲ್ಲಲ್ಲಿ ಆಸ್ಪತ್ರೆಗಳಲ್ಲಿ ಬೆಂಕಿ ಅವಘಡ ದುರಂತಗಳು ಸಂಭವಿಸುವುದು ನಿಲ್ಲುತ್ತಲೇ ಇಲ್ಲ. ಶನಿವಾರ ನಸುಕಿನ ಜಾವ ಗುಜರಾತ್ ನ ಬರೂಚ್ ನಗರದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಕನಿಷ್ಠ 18 ಮಂದಿ ಕೋವಿಡ್ ರೋಗಿಗಳು ಸಜೀವ ದಹನವಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಆಸ್ಪತ್ರೆಯ ಬೆಡ್ ಮತ್ತು ಸ್ಟ್ರೆಚರ್ಸ್ ಗಳ ಮೇಲೆ ಕೆಲವು ರೋಗಿಗಳು ಬೆಂಕಿಗೆ ಸಿಲುಕಿ ಒದ್ದಾಡಿ ಸಜೀವವಾಗಿ ದಹನವಾಗಿರುವ ದೃಶ್ಯ ಮನಕಲಕುವಂತಿದೆ.

ನಾಲ್ಕು ಮಹಡಿಯ ವೆಲ್ಫೇರ್ ಆಸ್ಪತ್ರೆಯಲ್ಲಿ ಸುಮಾರು 50 ರೋಗಿಗಳು ದಾಖಲಾಗಿದ್ದರು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಬಂದು ಇತರ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಕಾಪಾಡಿದ್ದಾರೆ.

ಬೆಳಗ್ಗೆ 6.30ಕ್ಕೆ ಸಿಕ್ಕಿದ ಮಾಹಿತಿ ಪ್ರಕಾರ, ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ದುರಂತ ನಡೆದ ತಕ್ಷಣ 12 ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಬರೂಚ್ ಎಸ್ಪಿ ರಾಜೇಂದ್ರಸಿನ್ಹ ಚೂಡಾಸಮ, ಬೆಂಕಿ ಕಾಣಿಸಿಕೊಂಡ ನಂತರ ಹೊಗೆ ತುಂಬಿಕೊಂಡು ಉಸಿರುಗಟ್ಟಿ 12 ಮಂದಿ ರೋಗಿಗಳು ಕೋವಿಡ್-19 ವಾರ್ಡ್ ನಲ್ಲಿ ಮೃತಪಟ್ಟಿದ್ದಾರೆ. ಉಳಿದ 6 ಮಂದಿ ರೋಗಿಗಳು ವೆಲ್ಫೋರ್ ಆಸ್ಪತ್ರೆಯಲ್ಲಿಯೇ ಮೃತಪಟ್ಟರೇ ಅಥವಾ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸುವಾಗ ಮೃತಪಟ್ಟರೇ ಎಂದು ಸ್ಪಷ್ಟ ಮಾಹಿತಿಯಿಲ್ಲ ಎಂದಿದ್ದಾರೆ.

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವೆಲ್ಫೇರ್ ಆಸ್ಪತ್ರೆ ಬರೂಚ್-ಜಂಬುಸರ್ ಹೆದ್ದಾರಿಯಲ್ಲಿದ್ದು ರಾಜ್ಯದ ರಾಜಧಾನಿ ಅಹಮದಾಬಾದ್ ನಿಂದ 190 ಕಿಲೋ ಮೀಟರ್ ದೂರದಲ್ಲಿದೆ. ಟ್ರಸ್ಟ್ ಇದನ್ನು ನಡೆಸಿಕೊಂಡು ಹೋಗುತ್ತಿದ್ದು ಬೆಂಕಿ ದುರಂತಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ.

ಕೆಲವೇ ಗಂಟೆಗಳಲ್ಲಿ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದಾರೆ. ಉಳಿದ ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಟ್ರಸ್ಟಿ ಝುಬರ್ ಪಟೇಲ್, ಇದು ನಮಗೆ ಮಾತ್ರವಲ್ಲದೆ ಇಡೀ ಬರೂಚ್ ಜನರಿಗೆ ದುರದೃಷ್ಟಕರ ದಿನ. ಪೊಲೀಸರು ಮತ್ತು ಆಡಳಿತ ಸಿಬ್ಬಂದಿ ಸಹಾಯದಿಂದ ಬೇರೆ ರೋಗಿಗಳನ್ನು ಹತ್ತಿರದ ಆಸ್ಪತ್ರೆಗೆ ವರ್ಗಾಯಿಸಿದ್ದೇವೆ. 14 ರೋಗಿಗಳು ಮತ್ತು ಇಬ್ಬರು ದಾದಿಯರು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

SCROLL FOR NEXT