ದೇಶ

ರಾಜ್ಯ ವಿಪತ್ತು ನಿರ್ವಹಣಾ ನಿಧಿ: ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ 8,873.6 ಕೋಟಿ ರೂ. ಮೊದಲ ಕಂತು ಬಿಡುಗಡೆ!

Sumana Upadhyaya

ನವದೆಹಲಿ: 2021-22ನೇ ಆರ್ಥಿಕ ಸಾಲಿನ ರಾಜ್ಯ ವಿಪತ್ತು ನಿರ್ವಹಣಾ ನಿಧಿ(ಎಸ್ ಡಿಆರ್ ಎಫ್)ನ ಕೇಂದ್ರ ಸರ್ಕಾರದ ಪಾಲಿನ ಮೊದಲ ಕಂತು 8 ಸಾವಿರದ 873.6 ಕೋಟಿ ರೂಪಾಯಿಗಳನ್ನು ಎಲ್ಲಾ ರಾಜ್ಯಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ಬಿಡುಗಡೆ ಮಾಡಿದೆ.

ಬಿಡುಗಡೆ ಮಾಡಿದ ಮೊದಲ ಕಂತಿನ ಹಣದಲ್ಲಿ ಶೇಕಡಾ 50ನ್ನು ಅಂದರೆ 4 ಸಾವಿರದ 436.8 ಕೋಟಿ ರೂಪಾಯಿಗಳನ್ನು ಕೋವಿಡ್ ನಿಗ್ರಹ ಕ್ರಮಗಳಿಗೆ ರಾಜ್ಯಗಳು ಬಳಸಿಕೊಳ್ಳಬಹುದು. ಗೃಹ ವ್ಯವಹಾರಗಳ ಸಚಿವಾಲಯದ ಶಿಫಾರಸು ಮೇರೆಗೆ ರಾಜ್ಯಗಳಿಗೆ ಈ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಪ್ರತಿವರ್ಷ ಎಸ್ ಡಿಆರ್ ಎಫ್ ಕಂತನ್ನು ಹಣಕಾಸು ಸಚಿವಾಲಯ ಬಿಡುಗಡೆ ಮಾಡುತ್ತದೆ. ಆದರೆ ಕೆಲವು ಬಾರಿ ವಿಶೇಷ ಸಂದರ್ಭಗಳಲ್ಲಿ ಎಸ್ ಡಿಆರ್ ಎಫ್ ಕಂತನ್ನು ಮೊದಲೇ ಬಳಕೆ ಪ್ರಮಾಣಪತ್ರಕ್ಕೆ ಕಾಯದೆ ರಾಜ್ಯಗಳಿಗೆ ಹಣಕಾಸು ಸಚಿವಾಲಯ ಬಿಡುಗಡೆ ಮಾಡುತ್ತದೆ,ಈ ವರ್ಷ ಕೊರೋನಾ ಎರಡನೇ ಅಲೆ ತಾಂಡವವಾಗಿ ರಾಜ್ಯಗಳಿಗೆ ಸಾಕಷ್ಟು ಆರೋಗ್ಯ ವ್ಯವಸ್ಥೆಗೆ ಹಣ ಬೇಕಾಗುವುದರಿಂದ ಒಂದು ತಿಂಗಳು ಮೊದಲೇ ಹಣ ಬಿಡುಗಡೆ ಮಾಡಲಾಗಿದೆ.

ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಹಣವನ್ನು ಕೋವಿಡ್-19 ಸೋಂಕಿನ ನಿಯಂತ್ರಣಕ್ಕೆ, ಆಕ್ಸಿಜನ್ ಉತ್ಪಾದನೆ ಮತ್ತು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ ಕೊರತೆಯಾಗಿರುವುದರಿಂದ ಉತ್ಪಾದನಾ ಘಟಕಗಳಿಗೆ, ಪೂರೈಕೆಗೆ, ವೆಂಟಿಲೇಟರ್ ಗಳಿಗೆ, ವಾಯು ಶುದ್ಧೀಕರಣ ಕ್ರಮಗಳಿಗೆ, ಆಂಬ್ಯುಲೆನ್ಸ್ ಸೇವೆಗಳಿಗೆ, ಕೋವಿಡ್-19 ಆಸ್ಪತ್ರೆಗಳಿಗೆ ಕೋವಿಡ್ ಕೇರ್ ಕೇಂದ್ರಗಳಿಗೆ, ಥರ್ಮಲ್ ಸ್ಕಾನರ್ ಗಳಿಗೆ, ವೈಯಕ್ತಿಕ ರಕ್ಷಣಾ ಸಾಮಗ್ರಿಗಳಿಗೆ, ಪರೀಕ್ಷೆ ಪ್ರಯೋಗಾಲಯಗಳಿಗೆ, ಟೆಸ್ಟಿಂಗ್ ಕಿಟ್ ಗಳಿಗೆ, ಕಂಟೈನ್ ಮೆಂಟ್ ವಲಯಗಳಲ್ಲಿ ಬಳಕೆಗೆ ಬಳಸಬಹುದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

SCROLL FOR NEXT