ದೇಶ

ನಂದಿಗ್ರಾಮ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ.. ಜನರ ತೀರ್ಪನ್ನು ಗೌರವಿಸುತ್ತೇನೆ: ಮಮತಾ ಬ್ಯಾನರ್ಜಿ

Srinivasamurthy VN

ಕೋಲ್ಕತಾ: ನಂದಿಗ್ರಾಮ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ.. ಜನರ ತೀರ್ಪನ್ನು ಗೌರವಿಸುತ್ತೇನೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ತಮ್ಮ ಶಿಷ್ಯ ಸುವೇಂದು ಅಧಿಕಾರಿ ವಿರುದ್ಧ ನಂದಿಗ್ರಾಮದಲ್ಲಿ ಸೋತ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, ನಂದಿಗ್ರಾಮ ಫಲಿತಾಂಶದ ಬಗ್ಗೆ ಚಿಂತಿಸಬೇಡಿ, ನಾನು ನಂದಿಗ್ರಾಮಕ್ಕಾಗಿ ಹೋರಾಡಿದ್ದೇನೆ. ಇದೇ ನಂದಿಗ್ರಾಮದಲ್ಲಿ ಈ ಹಿಂದೆ ಚಳುವಳಿಯಲ್ಲಿ  ಪಾಲ್ಗೊಂಡಿದ್ದೆ. ಆದರೂ ಪರವಾಗಿಲ್ಲ. ನಂದಿಗ್ರಾಮದ ಜನರು ತಮಗೆ ಬೇಕಾದ ಯಾವುದೇ ತೀರ್ಪು ನೀಡಲಿ, ನಾನು ಅದನ್ನು ಸ್ವೀಕರಿಸುತ್ತೇನೆ. ಫಲಿತಾಂಶದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾವು 221 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಮತ್ತು ಬಿಜೆಪಿ ಚುನಾವಣೆಯಲ್ಲಿ ಸೋತಿದೆ. ಬಿಜೆಪಿ ಅವರು ಕೊಳಕು  ರಾಜಕೀಯ ಮಾಡಿದ್ದರು. ಚುನಾವಣಾ ಆಯೋಗದ ಭಯಾನಕತೆಯ ನಡುವೆಯೂ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ಈ ಭರ್ಜರಿ ವಿಜಯಕ್ಕಾಗಿ ನಾವು ಜನರಿಗೆ ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.

ಅಂತೆಯೇ ಕೋವಿಡ್ ಮಹಾಮಾರಿ ವಿರುದ್ಧ ಹೋರಾಟ ನನ್ನ ಮೊದಲ ಆದ್ಯತೆಯಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ತಪ್ಪದೆ ಪಾಲಿಸಿ ಎಂದು ತಮ್ಮ ಕಾರ್ಯಕರ್ತರಿಗೆ ಹೇಳಿದ್ದಾರೆ.

ಪಶ್ಚಿಮ ಬಂಗಾಳದ 292 ಕ್ಷೇತ್ರಗಳ ಪೈಕಿ ಸಂಜೆ ವೇಳೆಗೆ ಟಿಎಂಸಿ 218, ಬಿಜೆಪಿ 71 ಮತ್ತು ಇತರರು ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಟಿಎಂಸಿಯ ಗೆಲುವು ಖಚಿತವಾಗಿದ್ದು, ಮತ್ತೊಂದು ಬಾರಿ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ರಾಜ್ಯಭಾರ ನಡೆಸಲಿದ್ದಾರೆ.

SCROLL FOR NEXT