ದೇಶ

ಟಿಎಂಸಿ ಕಾರ್ಯಕರ್ತರಿಂದ ಹಿಂಸಾಚಾರ: ನಾಳೆ ದೇಶಾದ್ಯಂತ ಧರಣಿಗೆ ಬಿಜೆಪಿ ಕರೆ

Nagaraja AB

ನವದೆಹಲಿ: ಆಡಳಿತಾರೂಢ ಟಿಎಂಸಿ ಪಕ್ಷದ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇಂದಿನಿಂದ ಎರಡು ದಿನ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ.

ಚುನಾವಣೋತ್ತರ ಹಿಂಸಾಚಾರದಲ್ಲಿ ತೊಂದರೆಗೊಳಗಾದ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಕುಟುಂಬ ವರ್ಗದವರನ್ನು ಜೆ. ಪಿ. ನಡ್ಡಾ ಭೇಟಿಯಾಗಲಿದ್ದು, ಪ್ರಜಾಸತಾತ್ಮಕ ಮಾರ್ಗದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿಕೆಯಲ್ಲಿ ಬಿಜೆಪಿ ತಿಳಿಸಿದೆ.

ಚುನಾವಣೆ ಮುಗಿದ 24 ಗಂಟೆಯೊಳಗೆ ಅನೇಕ ಬಿಜೆಪಿ ಕಾರ್ಯಕರ್ತರ ಕೊಲೆಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಅನೇಕ ಮನೆಗಳು, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಮಮತಾ ಬ್ಯಾನರ್ಜಿ ಸೋತ ನಂತರ ಟಿಎಂಸಿ ಗೂಂಡಾಗಳು ಹಿಂಸಾಚಾರ ಹಾಗೂ ರಕ್ತದೋಕುಳಿಯಲ್ಲಿ ವಿಜಯೋತ್ಸವ ಆಚರಿಸುವುದು ಖಂಡನೀಯ ಎಂದು ಬಿಜೆಪಿ ಹೇಳಿದೆ.

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ನಂತರ ಟಿಎಂಸಿ ಕಾರ್ಯಕರ್ತರು ನಡೆಸಿದ ವ್ಯಾಪಕ ಹಿಂಸಾಚಾರದ ವಿರುದ್ಧ ನಾಳೆ ರಾಷ್ಟ್ರದಾದ್ಯಂತ ಧರಣಿ ನಡೆಸಲಾಗುವುದು, ಕೋವಿಡ್-19 ಮಾರ್ಗಸೂಚಿ ಅನ್ವಯ ಈ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

SCROLL FOR NEXT