ದೇಶ

ತಮಿಳುನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ 11 ರೋಗಿಗಳು ಸಾವು; ಆಕ್ಸಿಜನ್ ಕೊರತೆ ಕಾರಣ ಅಲ್ಲ ಎಂದ ಅಧಿಕಾರಿಗಳು!

Srinivas Rao BV

ಚೆನ್ನೈ: ದೇಶದ ಹಲವು ಕಡೆ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಅನೇಕ ರೋಗಿಗಳು ಮೃತಪಟ್ಟ ಘಟನೆಗಳ ನಡುವೆಯೇ ಚೆಂಗಲ್‍ಪಟ್ಟು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿಯಿಂದ 11 ರೋಗಿಗಳು ಸಾವನ್ನಪ್ಪಿದ್ದಾರೆ.

ಆಮ್ಲಜನಕದ ಕೊರತೆಯಿಂದಾಗಿ ಸಾವುಗಳ ಸಂಭವಿಸಿವೆ ರೋಗಿಗಳ ಸಂಬಂಧಿಕರು ಆರೋಪಿಸಿದರೂ ಆರೋಗ್ಯ ಕಾರ್ಯದರ್ಶಿ ಡಾ. ಜೆ. ರಾಧಾಕೃಷ್ಣನ್ ಬುಧವಾರ ಇದನ್ನು ನಿರಾಕರಿಸಿದ್ದು, ಆಸ್ಪತ್ರೆಯಲ್ಲಿ ಸಾಕಷ್ಟು ಆಮ್ಲಜನಕ ಸಂಗ್ರಹವಿದೆ ಎಂದು ಹೇಳಿದ್ದಾರೆ.

‘ಇದು ಆಮ್ಲಜನಕ ಪೂರೈಕೆ ವಿಷಯವಲ್ಲ. ಆಸ್ಪತ್ರೆಯಲ್ಲಿ ಅನೇಕ ರೋಗಿಗಳು ಆಮ್ಲಜನಕ ನೆರವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ಸಾವುಗಳ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ತನಿಖೆಯ ನಂತರ ಸಾವಿಗೆ ಕಾರಣವೇನೆಂಬುದು ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ವೆಲ್ಲೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರು ರೋಗಿಗಳು ಸಾವನ್ನಪ್ಪಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ. ಆಮ್ಲಜನಕ ಪೂರೈಕೆ ವ್ಯತ್ಯಯದಿಂದ ಸಾವುಗಳು ಸಂಭವಿಸಿವೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಆದರೆ, ವೆಲ್ಲೂರು ಜಿಲ್ಲಾಡಳಿತ ಈ ಆರೋಪವನ್ನು ನಿರಾಕರಿಸಿದ್ದು, ಈ ಕುರಿತು ವೈದ್ಯಕೀಯ ಶಿಕ್ಷಣ ನಿರ್ದೇಶಕರಿಂದ ತನಿಖೆಗೆ ಆದೇಶಿಸಲಾಗಿದೆ.

SCROLL FOR NEXT