ದೇಶ

ಮಮತಾ ಬ್ಯಾನರ್ಜಿ ದೇಶದ ನಾಯಕಿ: ದೀದಿಯನ್ನು ಹಾಡಿ ಹೊಗಳಿದ ಕಮಲ್ ನಾಥ್

Lingaraj Badiger

ಇಂದೋರ್: ಪಶ್ಚಿಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ, ಸಿಬಿಐ ಮತ್ತು ಇಡಿಯಂತಹ ಕೇಂದ್ರ ಏಜೆನ್ಸಿಗಳು ಸೇರಿದಂತೆ ತನ್ನ ಎಲ್ಲ ವಿರೋಧಿಗಳನ್ನು ಸೋಲಿಸಿದ "ದೇಶದ ನಾಯಕಿ" ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರು ಬುಧವಾರ ಬಣ್ಣಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಟಿಎಂಸಿ ಅಧಿಪತ್ಯ ಹೊಂದುವ ಸಾಧ್ಯತೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್, ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್(ಯುಪಿಎ) ತನ್ನ ಚುನಾವಣಾ ನೇತೃತ್ವವನ್ನು ಸೂಕ್ತ ಸಮಯದಲ್ಲಿ ನಿರ್ಧರಿಸುತ್ತದೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಅವರು ಇಂದು ನಮ್ಮ ದೇಶದ ನಾಯಕಿ. ಅವರು ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಠಿಣ ಹೋರಾಟದ ನಂತರ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಅವರ ಮಂತ್ರಿಗಳು, ಸಿಬಿಐ, ಜಾರಿ ನಿರ್ದೇಶನಾಲಯ(ಇಡಿ) ಮತ್ತು ಆದಾಯ ತೆರಿಗೆ ಇಲಾಖೆಯ ವಿರುದ್ಧ ಮಮತಾ ಬ್ಯಾನರ್ಜಿ ಹೋರಾಡಬೇಕಾಯಿತು ಎಂದು ಕಮಲ್ ನಾಥ್ ಹೇಳಿದರು. 

"ಆದರೂ ಅವರು ಎಲ್ಲರನ್ನೂ ಒದ್ದು ಓಡಿಸಿದ್ದಾರೆ" ಎಂದರು.

2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಬ್ಯಾನರ್ಜಿಯನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬಹುದೇ ಎಂಬ ಪ್ರಶ್ನೆಗೆ, "ಸದ್ಯ ಆ ಬಗ್ಗೆ ಗೊತ್ತಿಲ್ಲ. ಅದನ್ನು ಯುಪಿಎ ನಿರ್ಧರಿಸುತ್ತದೆ" ಎಂದು ಕಮಲ್ ನಾಥ್ ಹೇಳಿದರು.

SCROLL FOR NEXT