ದೇಶ

ಪಕ್ಷ ತೊರೆದವರು ದ್ರೋಹಿಗಳು: ನಾಯಕರ ಸರಣಿ ರಾಜಿನಾಮೆ ಕುರಿತು ಎಂಎನ್‌ಎಂ ವರಿಷ್ಠ ಕಮಲ್‌ ಹಾಸನ್‌ ಆಕ್ರೋಶ

Srinivasamurthy VN

ಚೆನ್ನೈ: ತಮಿಳುನಾಡಿನಲ್ಲಿ ಸೂಪರ್‌ ಸ್ಟಾರ್‌ ಕಮಲ್ ಹಾಸನ್ ಅವರ ಮಕ್ಕಳ ನೀದಿ ಮಯ್ಯಂ (ಎಂಎನ್ಎಂ) ಪಕ್ಷದಲ್ಲಿ ಈಗ ರಾಜೀನಾಮೆ ಪರ್ವ ಮುಂದುವರೆದಿದೆ.

ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಹಲವು ಮುಖಂಡರು ಈಗಾಗಲೇ ಪಕ್ಷ ತೊರೆದಿದ್ದಾರೆ. ಶುಕ್ರವಾರ ಪಕ್ಷದ ಉಪಾಧ್ಯಕ್ಷ ಆರ್ ಮಹೇಂದ್ರನ್ ಕೂಡ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಂಬಂಧ ಅವರು ಪಕ್ಷದ ಅಧ್ಯಕ್ಷ ಕಮಲ್  ಹಾಸನ್‌ ಅವರಿಗೆ ಪತ್ರ ಬರೆದು ತಮ್ಮ ನಿರ್ಧಾರಕ್ಕೆ ಹಲವು ಕಾರಣಗಳನ್ನು ವಿವರಿಸಿದ್ದಾರೆ.

ಮಹೇಂದ್ರನ್ ರಾಜೀನಾಮೆ ನೀಡಿರುವ ಬಗ್ಗೆ ಕಮಲ ಹಾಸನ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅವರನ್ನು “ದ್ರೋಹಿ” ಎಂದು ಜರಿದಿದ್ದಾರೆ. ಮಹೇಂದ್ರನ್ ರಾಜೀನಾಮೆ ನೀಡದಿದ್ದರೂ ನಾವೇ ಅವರನ್ನು ಪಕ್ಷದಿಂದ ವಜಾಗೊಳಿಸುತ್ತಿದ್ದೆವು. ಪಕ್ಷದಿಂದ “ಮುಳ್ಳಿನ ಗಿಡ” ವೊಂದು ತೊಲಗಿದೆ. ನಾವು ಅದಕ್ಕೆ  ಸಂತೋಷಪಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಹೇಡಿಗಳು ಪಕ್ಷ ತೊರೆಯುವ ಬಗ್ಗೆ ನಾವು ಯೋಚಿಸುವುದಿಲ್ಲ, ಕೆಲವರ ರಾಜೀನಾಮೆಯಿಂದ ಪಕ್ಷದ ಗುರಿಮಾತ್ರ ಬದಲಾಗುವುದಿಲ್ಲ ಎಂದು ಕಮಲ್‌ಹಾಸನ್‌ ಸ್ಪಷ್ಟಪಡಿಸಿದ್ದಾರೆ.

ನಾಯಕರ ಸರಣಿ ರಾಜಿನಾಮೆ
ಇನ್ನು ಎಂಎನ್ಎಂ ಪಕ್ಷದ ಸದಸ್ಯರಾದ ಡಾ.ಆರ್.ಮಹೇಂದ್ರನ್, ಮುರುಗಾನಂದಮ್, ಮೌರ್ಯ, ತಂಗವೇಲು, ಉಮಾದೇವಿ, ಸಿಕೆ ಕುಮಾರವೇಲ್, ಶೇಕರ್ ಮತ್ತು ಸುರೇಶ್ ಅಯ್ಯರ್ ರಾಜೀನಾಮೆ ನೀಡಿದ್ದಾರೆ ಎಂದು ಎಂಎನ್‌ಎಂ ಪತ್ರಿಕಾ ಹೇಳಿಕೆ ನೀಡಿದೆ. ಅಂತೆಯೇ ಪಕ್ಷದ ವರಿಷ್ಠರಾದ ಕಮಲ್ ಹಾಸನ್ ಈ  ರಾಜೀನಾಮೆಗಳನ್ನು ಸ್ವೀಕರಿಸುವ ಮತ್ತು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ನಿರ್ಧರಿಸುತ್ತಾರೆ ಎಂದು ಸ್ಪಷ್ಟಪಡಿಸಿದೆ.
 

SCROLL FOR NEXT