ದೇಶ

ರಾಜಸ್ಥಾನ: ಮೃತ ಕೋವಿಡ್-19 ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 21 ಮಂದಿ ಸಾವು

Srinivasamurthy VN

ಜೈಪುರ: ಮೃತ ಕೋವಿಡ್-19 ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 150 ಮಂದಿಯ ಪೈಕಿ 21 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ರಾಜಸ್ತಾನದ ಸಿಕರ್ ಜಿಲ್ಲೆಯ ಖೀರ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೋವಿಡ್-19 ನಿಯಮಾಳಗಳನ್ನು ಅನುಸರಿಸದೇ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 150 ಮಂದಿಯ ಪೈಕಿ 21 ಮಂದಿ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಸೋಂಕಿತನ ಮೃತದೇಹವನ್ನು ಏಪ್ರಿಲ್ 21 ರಂದು ಖೀರ್ವಾ  ಗ್ರಾಮಕ್ಕೆ ತರಲಾಗಿತ್ತು. ಸುಮಾರು 150 ಜನರು ಅಂತ್ಯಕ್ರಿಯೆಯಲ್ಲಿ ಹಾಜರಾಗಿದ್ದರು. ಕೊರೋನಾವೈರಸ್ ಪ್ರೋಟೋಕಾಲ್ ಅನ್ನು ಅನುಸರಿಸದೆ ಸಮಾಧಿ ಮಾಡಲಾಗಿದ್ದು, ಪ್ಲಾಸ್ಟಿಕ್ ಚೀಲದಲ್ಲಿದ್ದ ಶವವನ್ನು ಹೊರತೆಗೆದು, ಸಮಾಧಿ ಮಾಡಲಾಗಿದೆ. ಈ ಸಮಯದಲ್ಲಿ ಹಲವಾರು ಜನರು ಮೃತದೇಹವನ್ನು ಮುಟ್ಟಿದ್ದಾರೆ  ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 21 ಮಂದಿ ಸಾವನ್ನಪ್ಪಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ಏಪ್ರಿಲ್ 15 ಮತ್ತು ಮೇ 5 ರ ನಡುವೆ ವೈರಸ್‌ನಿಂದ ಕೇವಲ ನಾಲ್ಕು ಸಾವುಗಳು ಸಂಭವಿಸಿವೆ ಎಂದು ಸ್ಪಷ್ಟಪಡಿಸಿದೆ. 'ಗ್ರಾಮದಲ್ಲಿ ಸಂಭವಿಸಿರುವ 21 ಸಾವುಗಳ ಪೈಕಿ 3 ಅಥವಾ 4  ಮಂದಿ ಮಾತ್ರ ಕೊರೋನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಾವುಗಳು ವೃದ್ಧಾಪ್ಯದಿಂದ ಬಂದವಾಗಿವೆ. ಗ್ರಾಮದಲ್ಲಿ ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಸಾವುಗಳು ಸಂಭವಿಸಿದ 147 ಕುಟುಂಬಗಳ ಸದಸ್ಯರ ಸ್ವಾಬ್ (ಗಂಟಲು ದ್ರವ)  ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಲಕ್ಷ್ಮಣ್ ಘಡದ ಉಪ ವಿಭಾಗೀಯ ಅಧಿಕಾರಿ ಕುಲರಾಜ್ ಮೀನಾ ಮಾಹಿತಿ ನೀಡಿದ್ದಾರೆ.

ಅಂತೆಯೇ ಇಡೀ ಗ್ರಾಮದಲ್ಲಿ ಜಿಲ್ಲಾಡಳಿತ ಸ್ಯಾನಿಟೈಸೇಶನ್ ಕಾರ್ಯಕ್ರಮ ನಡೆಸಿದೆ. ಸಮಸ್ಯೆಯ ತೀವ್ರತೆಯ ಬಗ್ಗೆ ಗ್ರಾಮಸ್ಥರಿಗೆ ವಿವರಿಸಲಾಗಿದ್ದು, ಈಗ ಅವರು ಸಹಕರಿಸುತ್ತಿದ್ದಾರೆ ಎಂದು ಸಿಕಾರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಅಜಯ್ ಚೌಧರಿ ಹೇಳಿದ್ದಾರೆ. ಅಂತೆಯೇ ಸ್ಥಳೀಯ  ಅಧಿಕಾರಿಗಳಿಂದ ವರದಿಯನ್ನು ಕೋರಲಾಗಿದೆ ಎಂದು ಹೇಳಿದ್ದಾರೆ. 

ಸಾವುಗಳ ಕುರಿತು ಪೋಸ್ಟ್ ಮಾಡಿದ್ದ ಕಾಂಗ್ರೆಸ್ ನಾಯಕ
ಖೀರ್ವಾ ಗ್ರಾಮ ದೋಟಾಸ್ರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿದ್ದು, ಸ್ಥಳೀಯ ಕಾಂಗ್ರೆಸ್ ರಾಜ್ಯ ಮುಖಂಡ ಗೋವಿಂದ್ ಸಿಂಗ್ ಸೋಂಕಿತರ ಶವವನ್ನು ಸಮಾಧಿ ಮಾಡಿದ, ಸಾವುಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಅದನ್ನು ತೆಗೆದು ಹಾಕಿದ್ದರು. ಈ ಪೋಸ್ಟ್ ನಲ್ಲಿ  ಖೀರ್ವಾ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವಾರು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದರು. 
 

SCROLL FOR NEXT