ದೇಶ

ಕೋವಿಡ್-19: ಉತ್ತರಾಖಂಡ ಪ್ರವೇಶಿಸಲು ಆರ್‌ಟಿ-ಪಿಸಿಆರ್ ನಗೆಟಿವ್ ವರದಿ ಕಡ್ಡಾಯ

Lingaraj Badiger

ಡೆಹ್ರಾಡೂನ್: ಕೊರೋನಾ ಕರ್ಫ್ಯೂ ಅವಧಿಯಲ್ಲಿ ರಾಜ್ಯಕ್ಕೆ ಬರುವ ಜನರಿಗೆ ಆರ್‌ಟಿಪಿಸಿಆರ್ ನೆಗಟಿವ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ಸೋಮವಾರ ತಿಳಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಡೆಹ್ರಾಡೂನ್, ಹರಿದ್ವಾರ, ಉಧಮ್‌ಸಿಂಗ್‌ನಗರ, ಮತ್ತು ನೈನಿತಾಲ್ ನಿಂದ ಉತ್ತರಾಖಂಡದೊಳಗಿನ ಪರ್ವತಗಳಿಗೆ ಹೋಗುವ ಜನರು ಆರ್‌ಟಿಪಿಸಿಆರ್ ನೆಗಟಿವ್ ವರದಿ ಮತ್ತು ರಾಪಿಡ್ ಆಂಟಿಜೆನ್ ವರದಿ ಕಡ್ಡಾಯವಾಗಿ ನೀಡಬೇಕು.

ಉತ್ತರಾಖಂಡದಲ್ಲಿ ಮೇ 18 ರವರೆಗೆ ಕೊರೋನಾ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಈ ಸಮಯದಲ್ಲಿ ರಾಜ್ಯಕ್ಕೆ ಬರುವವರು, 72 ಗಂಟೆಗಳ ಮೊದಲು ಆರ್‌ಟಿಪಿಸಿಆರ್ ನೆಗಟಿವ್ ವರದಿ ನೀಡಬೇಕು. ಇಲ್ಲದಿದ್ದರೆ ರಾಜ್ಯ ಪ್ರವೇಶಿಸಲು ಅವಕಾಶ ಇಲ್ಲ. ಅಲ್ಲದೆ ರಾಜ್ಯವನ್ನು ಪ್ರವೇಶಿಸಲು ಸ್ಮಾರ್ಟ್ ಸಿಟಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಸಹ ಅಗತ್ಯವಾಗಿರುತ್ತದೆ ಎಂದು ಮಾರ್ಗಸೂಚಿ ತಿಳಿಸಿದೆ.

ಕೊರೋನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಭಾನುವಾರದಿಂದ ಮೇ 18 ರವರೆಗೆ ರಾಜ್ಯವ್ಯಾಪಿ ಕೊರೋನಾ ಕರ್ಫ್ಯೂ ಜಾರಿಗೊಳಿಸಿದೆ.

SCROLL FOR NEXT