ದೇಶ

ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಪ್ರಸ್ತಾವನೆ ಇಲ್ಲ, ನೋಂದಾಯಿತ ಕೇಂದ್ರಗಳಲ್ಲಿ ಮಾತ್ರ ಲಸಿಕೆ: ಸುಪ್ರೀಂಗೆ ಕೇಂದ್ರ

Srinivas Rao BV

ನವದೆಹಲಿ: ಕೋವಿಡ್-19 ಲಸಿಕೆಯನ್ನು ಮನೆ ಬಾಗಿಲಿಗೆ ತೆರಳಿ ನೀಡುವ ಪ್ರಸ್ತಾವನೆ ಇಲ್ಲ, ಕೇವಲ ನೋಂದಾಯಿತ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 

ಒಳ್ಳೆಯ, ತರ್ಕಬದ್ಧ ಕಾರಣಗಳನ್ನಿಟ್ಟುಕೊಂಡೇ ಕೋವಿನ್ ನೋಂದಣಿ ಪೋರ್ಟಲ್ ಮೂಲಕವೇ ಲಸಿಕೆ ನೀಡುವ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಕೇಂದ್ರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ. 

ಕೋವಿಡ್-19 ಲಸಿಕೆ ಕೇಂದ್ರಗಳಲ್ಲಿ ಸಮರ್ಪಕ ಸ್ಥಳ, ಕೋಲ್ಡ್ ಸ್ಟೋರೇಜ್ ಸೌಲಭ್ಯ, ಸಮರ್ಪಕ ಲಸಿಕೆಗಳು ಹಾಗೂ ಲಸಿಕೆ ನೀಡಿದ ಬಳಿಕ ಪ್ರತಿಕೂಲ ಪರಿಣಾಮ ಎದುರಾದಲ್ಲಿ ಅದನ್ನು ನಿಭಾಯಿಸುವುದಕ್ಕೆ ವೈದ್ಯಕೀಯ ಸಪೋರ್ಟ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ, ಒಂದು ವೇಳೆ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಿದರೆ ಇವುಗಳನ್ನು ಹೊಂದಿಸುವುದು ಕಷ್ಟವಾಗಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ಮನವರಿಕೆ ಮಾಡಿಕೊಟ್ಟಿದೆ. 

ಕೋವಿಡ್-19 ಲಸಿಕೆಗೆ ರಾಷ್ಟ್ರವ್ಯಾಪಿ ಸಮೂಹ ಜಾಗೃತಿ ಹಾಮ್ಮಿಕೊಂಡು,  ಮೊಬೈಲ್ ವಾಹನಗಳು, ರೈಲ್ವೆ, ವಾಹನಗಳನ್ನು ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶಗಳನ್ನು ಹಾಗೂ ಸೌಲಭ್ಯ ವಂಚಿತ ಪ್ರದೇಶಗಳನ್ನು ತಲುಪುವುದಕ್ಕೆ ಸಾಧ್ಯವಿದೆಯೇ? ಅಂತಹ ಪ್ರದೇಶಗಳಲ್ಲಿರುವ ಜನತೆಗೆ ಮನೆ ಬಾಗಿಲಿಗೇ ತೆರಳಿ ಲಸಿಕೆ ನೀಡುವುದಕ್ಕೆ ಯೋಜನೆಗಳಿವೆಯೇ? ಎಂಬ ಕೋರ್ಟ್ ನ ಪ್ರಶ್ನೆಗೆ ಕೇಂದ್ರ ಉತ್ತರ ನೀಡಿದೆ. 

ಈ ಸಂಬಂಧ ಕೋರ್ಟ್ ಗೆ ಕೇಂದ್ರ ಸರ್ಕಾರ 218 ಪುಟಗಳ ವಿಸ್ತೃತ ಪ್ರಮಾಣಪತ್ರವನ್ನು ನೀಡಿದ್ದು, ಫಲಾನುಭವಿಗಳು ಕೋವಿನ್ ಮೂಲಕವೇ ತಮ್ಮ ಹತ್ತಿರದ ಕೋವಿಡ್-19 ಲಸಿಕೆ ಕೇಂದ್ರಗಳನ್ನು ಪತ್ತೆ ಮಾಡಬಹುದಾಗಿದೆ ಎಂದು ಹೇಳಿದೆ. 

SCROLL FOR NEXT