ದೇಶ

ಗಂಗಾ, ಉಪನದಿಗಳಲ್ಲಿ ಶವಗಳನ್ನು ಎಸೆಯುವ ಘಟನೆಗಳನ್ನು ತಡೆಯುವಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ

Srinivas Rao BV

ನವದೆಹಲಿ: ಗಂಗಾ ನದಿಯಲ್ಲಿ ಶವಗಳು ತೇಲಿ ಬರುತ್ತಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಗಂಗಾ ನದಿ ತೀರದಲ್ಲಿರುವ ರಾಜ್ಯಗಳಿಗೆ ಇಂತಹ ಘಟನೆಗಳನ್ನು ತಡೆಯುವಂತೆ ಸೂಚನೆ ನೀಡಿದೆ.

ಜಿಲ್ಲಾ ಗಂಗಾ ಸಮಿತಿಗಳಿಗೆ ರಾಷ್ಟ್ರೀಯ ಮಿಷನ್ ಫಾರ್ ಕ್ಲೀನ್ ಗಂಗಾ ಪತ್ರ ಬರೆದಿದ್ದು,  ಇಂತಹ ಘಟನೆಗಳು ಮುಂದೆ ನಡೆಯದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ. 

ನದಿಯಲ್ಲಿ ಪತ್ತೆಯಾಗಿರುವ ಶವಗಳು ಕೋವಿಡ್-19 ಸೋಂಕಿತರದ್ದೆಂದು ಶಂಕಿಸಲಾಗುತ್ತಿದ್ದು, ಸುರಕ್ಷಾ ನಿಯಮಗಳನ್ನು ಪಾಲನೆ ಮಾಡಿ ಅವುಗಳನ್ನು ವಿಲೇವಾರಿ ಮಾಡುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. 14 ದಿನಗಳಲ್ಲಿ ಈ ಸಂಬಂಧ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವರದಿ ನೀಡುವಂತೆ ಎನ್ಎಂಸಿಜಿಯ ಪ್ರಧಾನ ನಿರ್ದೇಶಕ ರಾಜೀವ್ ರಂಜಮ್ ಮಿಶ್ರಾ ಸಮಿತಿಗಳ ಅಧ್ಯಕ್ಷರುಗಳಿಗೆ ಸೂಚನೆ ನೀಡಿದ್ದಾರೆ. 

ಶವಗಳನ್ನು ನದಿಗೆ ಎಸೆಯುವುದರಿಂದ ನದಿ ಮಲಿನಗೊಳ್ಳುವುದರ ಜೊತೆಗೆ ಸ್ವಚ್ಛತೆಯೂ ಹಾಳಾಗುತ್ತದೆ, ಜೊತೆಗೆ ನದಿ/ ಉಪನದಿಗಳ ಮೇಲೆ ಆಧಾರವಾಗಿರುವ ಸಮುದಾಯಗಳಲ್ಲಿ ಸೋಂಕು ಹರಡುವುದಕ್ಕೂ ಕಾರಣವಾಗಲಿದೆ ಎಂದು ಮಿಶ್ರಾ ಎಚ್ಚರಿಸಿದ್ದಾರೆ. 

ಬಿಹಾರ, ಉತ್ತರ ಪ್ರದೇಶಗಳಲ್ಲಿ ಗಂಗಾ ಮತ್ತು ಯಮುನಾ ನದಿಗಳಲ್ಲಿ ಕಳೆದ 2 ದಿನಗಳಿಂದ ಶವಗಳು ತೇಲಿಬರುತ್ತಿದ್ದ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿದೆ. ಬಿಹಾರದಲ್ಲಿ ಈ ವರೆಗೂ ಇಂತಹ 71 ಶವಗಳು ಪತ್ತೆಯಾಗಿವೆ. 

SCROLL FOR NEXT