ದೇಶ

ಭಾರತದ ಲಸಿಕೆ ನೀತಿ ವಿಶ್ವದಲ್ಲೇ ಅತ್ಯಂತ ಕೆಟ್ಟದ್ದು: ಒವೈಸಿ

Srinivas Rao BV

ಹೈದರಾಬಾದ್: ಪ್ರಪಂಚದಲ್ಲಿ ಅತ್ಯಂತ ಕೆಟ್ಟ ಲಸಿಕೆ ನೀತಿಗೆ ಯಾವುದಾದರೂ ಪುರಸ್ಕಾರ ಲಭಿಸುವುದಾದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೀಡಬೇಕು ಎಂದು ಎಐಐಎಂ ಅಧ್ಯಕ್ಷ, ಲೋಕಸಭಾ ಸದಸ್ಯ ಅಸದುದ್ದೀನ್ ಒವೈಸಿ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರ್ಕಾರ ಅಗತ್ಯವಿರುವಷ್ಟು ಡೋಸ್ ಲಸಿಕೆ ಖರೀದಿಗೆ  ಆದೇಶಿಸಿಲ್ಲ. ದೇಶದ ಜನಸಂಖ್ಯೆಯ ಕೇವಲ ಶೇ. 2ರಷ್ಟು  ಮಾತ್ರ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಲಸಿಕೆಗಳಿಗೆ ರಾಜ್ಯಗಳು ಬಲವಂತದಿಂದ ಹೆಚ್ಚಿನ ದರ ಪಾವತಿಸುವಂತಾಗಿದೆ ಎಂದು ಅವರು ಟ್ವೀಟ್ ನಲ್ಲಿ ಟೀಕಿಸಿದ್ದಾರೆ. 

ಆದರೆ, ರಾಜ್ಯಗಳು ಕೇವಲ ಶೇ 25 ರಷ್ಟು  ಲಸಿಕೆ ಪಡೆದುಕೊಳ್ಳಬೇಕಾಗಿದೆ. ಜನಸಂಖ್ಯೆಯ ಶೇ. 74.35 ರಷ್ಟು ಮಂದಿಗೆ ಲಸಿಕೆ ನೀಡುವ ಜವಾಬ್ದಾರಿ ರಾಜ್ಯಗಳ ಸರ್ಕಾರಗಳ ಮೇಲಿದೆ. ಆದರೆ ಕೇವಲ ಶೇ.25 ರಷ್ಟು  ಡೋಸ್ ಗಳನ್ನು ಮಾತ್ರ ನೇರವಾಗಿ ಖರೀದಿಸಲು ರಾಜ್ಯಗಳಿಗೆ ಅವಕಾಶವಿದೆ  ಇನ್ನೂ ಶೇ 25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮೀಸಲಿಡಲಾಗಿದೆ.

ಕ್ವಾರ್ಟಜ್ ವರದಿಯ ಪ್ರಕಾರ ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದನಾ ವೆಚ್ಚ 30 ರೂಪಾಯಿಂದ 80 ರೂಪಾಯಿ ಆಗಲಿದೆ ಎಂದು ಅಂದಾಜಿಸಿದೆ. ಇದು ಸತ್ಯವಾಗಿದ್ದರೆ ದೇಶದಲ್ಲಿ  ಪ್ರತಿ ಡೋಸ್ ಗೆ 150 ರೂ ನಿಗಧಿಯಿಂದಲೇ ಲಸಿಕೆ ತಯಾರಿಕಾ ಸಂಸ್ಥೆಗಳು ಶೇ. 188 ರಿಂದ 500 ರಷ್ಟು ಲಾಭ ಪಡೆದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಎಲ್ಲಿದ್ದಾರೆ?  ದೇಶದ  ಜನರು  ಸಂಕಷ್ಟ ಪಡುತ್ತಿರುವಾಗ ಈ ಎರಡು ಸಂಸ್ಥೆಗಳು ಮಾತ್ರ ಲಾಭ ಗಳಿಸುತ್ತಿರುವುದು ಏಕೆ? ಅವರು ಎಲ್ಲಿಗೆ ಹೋದರು? ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಬಹುದು.

ಆದರೆ  ಮೌನ ಎಂಬ ಗೋಡೆಯ ಹಿಂದೆ ಬಚ್ಚಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಈ ದುಃಖ, ವಿನಾಶದ ಜವಾಬ್ದಾರಿ ಹೊರಲೇಬೇಕು ಎಂದು ಅಸದುದ್ದೀನ್ ಹೇಳಿದ್ದಾರೆ.

SCROLL FOR NEXT