ದೇಶ

ದೆಹಲಿಯಲ್ಲಿ ಪಾಸಿಟಿವ್ ಪ್ರಮಾಣ ಇಳಿಕೆ, ಹೆಚ್ಚುವರಿ ಆಕ್ಸಿಜನ್ ಇತರ ರಾಜ್ಯಗಳಿಗೆ ನೀಡಿ: ಕೇಂದ್ರಕ್ಕೆ ಸಿಸೋಡಿಯಾ ಪತ್ರ

Lingaraj Badiger

ನವದೆಹಲಿ: ದೆಹಲಿಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಮಾಣ ಕಡಿಮೆಯಾಗಿದ್ದು, ರಾಷ್ಟ್ರ ರಾಜಧಾನಿಗೆ ನೀಡಲಾಗುತ್ತಿರುವ ಹೆಚ್ಚುವರಿ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ಪೂರೈಸಬಹುದು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಗುರುವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದ್ದಾರೆ.

ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳದಿಂದಾಗಿ ತಾವು ಸಂಕಷ್ಟದಲ್ಲಿದ್ದಾಗ ದೆಹಲಿಯ ಜನರಿಗೆ ನೆರವು ನೀಡಿದ ಕೇಂದ್ರ ಸರ್ಕಾರ ಮತ್ತು ದೆಹಲಿ ಹೈಕೋರ್ಟ್‌ಗೆ ಸಿಸೋಡಿಯಾ ಅವರು ಧನ್ಯವಾದ ಅರ್ಪಿಸಿದ್ದಾರೆ.

ದೆಹಲಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 10,400 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಮತ್ತು ಪಾಸಿಟಿವ್ ಪ್ರಮಾಣವು ಶೇಕಡಾ 14 ರಷ್ಟಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಾಗ ರಾಷ್ಟ್ರ ರಾಜಧಾನಿಗೆ 700 ಮೆ.ಟನ್ ಆಮ್ಲಜನಕದ ಅವಶ್ಯಕತೆ ಇತ್ತು. ಆದರೆ ಈಗ ಪಾಸಿಟಿವ್ ಪ್ರಕರಣಗಳು ಕ್ಷೀಣಿಸುತ್ತಿರುವುದರಿಂದ, ಆಕ್ಸಿಜನ್ ಅಗತ್ಯ 582 ಮೆ.ಟನ್.ಗೆ ಇಳಿದಿದೆ. ಹೀಗಾಗಿ 

"ಹೆಚ್ಚುವರಿ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ನೀಡುವಂತೆ ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ನಮ್ಮದು ಜವಾಬ್ದಾರಿಯುತ ಸರ್ಕಾರ" ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.

SCROLL FOR NEXT