ದೇಶ

ಗುಜರಾತ್, ಅಸ್ಸಾಂ, ಕರ್ನಾಟಕ ರಾಜ್ಯಗಳಿಗೆ ಕೋವ್ಯಾಕ್ಸಿನ್ ರವಾನಿಸಲಾಗಿದೆ: ಭಾರತ್ ಬಯೋಟೆಕ್

Manjula VN

ನವದೆಹಲಿ: ಗುಜರಾತ್, ಅಸ್ಸಾಂ, ತಮಿಳುನಾಡು, ಕರ್ನಾಟಕ ಮತ್ತು ಒಡಿಶಾ ರಾಜ್ಯಗಳಿಗೆ ಕೋವ್ಯಾಕ್ಸಿನ್ ಕೊರೋನಾ ಲಸಿಕೆಗಳನ್ನು ರವಾನಿಸಲಾಗಿದೆ ಎಂದು ಭಾರತ್ ಬಯೋಟೆಕ್ ಶುಕ್ರವಾರ ಹೇಳಿದೆ.

ಕೋವ್ಯಾಕ್ಸಿನ್ ಲಸಿಕೆ ಸರಬರಾಜು ಸಂಬಂಧ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತ್ ಭಯೋಟೆಕ್ ಸಹ-ಸಂಸ್ಥಾಪಕಿ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ಅವರು, :  ಗುಜರಾತ್, ಅಸ್ಸಾಂ, ತಮಿಳುನಾಡು, ಕರ್ನಾಟಕ ಮತ್ತು ಒಡಿಶಾ ರಾಜ್ಯಗಳಿಗೆ ಕೋವ್ಯಾಕ್ಸಿನ್ ಕೊರೋನಾ ಲಸಿಕೆಗಳನ್ನು ರವಾನಿಸಲಾಗಿದೆ. ಇದಷ್ಟೇ ಅಲ್ಲದೆ, ಕೇರಳ ಹಾಗೂ ಉತ್ತರಾಖಂಡ ರಾಜ್ಯಗಳಿಗೂ ರವಾನಿಸಲಾಗಿದೆ ಎಂದು ಹೇಳಿದ್ದಾರೆ. 

ಗಾಂಧಿನಗರ, ಗುವಾಹಟಿ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಭುವನೇಶ್ವರಕ್ಕೂ ಲಸಿಕೆಯನ್ನು ರವಾನಿಸಲಾಗಿದೆ. ರಂಜಾನ್ ಪವಿತ್ರ ತಿಂಗಳಿನಲ್ಲಿಯೂ ಕೆಲಸ ಮಾಡುತ್ತಿರುವ ಎಲ್ಲಾ ಕೆಲಸಗಾರರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. 

ಗುರುವಾರ ಟ್ವೀಟ್ ಮಾಡಿದ್ದ ಸುಚಿತ್ರಾ ಎಲ್ಲಾ ಅವರು, ಕೇರಳ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಕೋವ್ಯಾಕ್ಸಿನ್ ಲಸಿಕೆ ರವಾನಿಸಲಾಗಿದೆ. ಸಾಕಷ್ಟು ಜನರು ಸಹಾಯ ಕೇಳಿದ್ದರು. ನಮ್ಮ ಕೆಲಸ ಅತ್ಯಂತ ಕಠಿಣ, ನೈಜ ಸಮಯ ಮತ್ತು ತಾಂತ್ರಿಕವಾಗಿದೆ. ಯಾರೊಬ್ಬರೂ ವರ್ಕ್ ಫ್ರಂ ಹೋಮ್ ಮಾಡುತ್ತಿಲ್ಲ. ನಮ್ಮ ಎಲ್ಲ ಉದ್ಯೋಗಿಗಳನ್ನು ಸುರಕ್ಷಿತತೆಯಿಂದ ನೋಡಿಕೊಳ್ಳಲಾಗುತ್ತದೆ, ನಮ್ಮ ಧ್ಯೇಯವನ್ನು ತಡೆಯಲು ಸಾಧ್ಯವಿಲ್ಲ, ಯಾವಾಗಲೂ ಕೃತಜ್ಞರಾಗಿರಬೇಕು, ಸಹಾಯಕವಾಗಬಹುದು ಮತ್ತು ಭರವಸೆಯಿಡೋಣ ಎಂದು ತಿಳಿಸಿದ್ದಾರೆ. 

ಆದರೆ, ಯಾವ ರಾಜ್ಯಕ್ಕೆ  ಎಷ್ಟು ಲಸಿಕೆಗಳನ್ನು ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿಯನ್ನೂ ಮಾತ್ರ ಸುಚಿತ್ರಾ ಅವರು ತಿಳಿಸಿಲ್ಲ. 

ಮೇ 12 ರಂದು ಹೇಳಿಕೆ ನೀಡಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಭಾರತ್ ಬಯೋಟೆಕ್ ರಾಷ್ಟ್ರ ರಾಜಧಾನಿಗೆ 'ಹೆಚ್ಚುವರಿ' ಕೋವಾಕ್ಸಿನ್'ನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ಹೇಳಿದ್ದರು. 

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸುಚಿತ್ರಾ ಅವರು, ಕೋವ್ಯಾಕ್ಸಿನ್ ಲಸಿಕೆ ಸರಬರಾಜು ಸಂಬಂಧ ಹಲವು ರಾಜ್ಯಗಳು ಉದ್ದೇಶಪೂರ್ವಕವಾಗಿ ದೂರು ನೀಡಿರುವುದು ನಿರಾಸೆ ಉಂಟು ಮಾಡಿದೆ ಎಂದು ಹೇಳಿದ್ದರು. ಮೇ.10 ರಂದು ಸಂಸ್ಥೆಯು 18 ರಾಜ್ಯಗಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ರವಾನಿಸಿದೆ ಎಂದು ಸ್ಪಷ್ಟಪಡಿಸಿದ್ದರು. 

SCROLL FOR NEXT