ದೇಶ

12ನೇ ತರಗತಿಯ ಸಿಬಿಎಸ್‌ಇ, ಐಸಿಎಸ್‌ಇ ಪರೀಕ್ಷೆ ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Lingaraj Badiger

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಹಿನ್ನೆಲೆಯಲ್ಲಿ 12ನೇ ತರಗತಿಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿರ್ದೇಶನ ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿದಾರರ ಪರ ವಕೀಲ ಮಮತಾ ಶರ್ಮಾ, ಮುಗ್ಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಅನಿಯಂತ್ರಿತ, ಅಮಾನವೀಯ
ನಿರ್ದೇಶನಗಳನ್ನು ನೀಡಲಾಗಿದೆ. ಕಳೆದ ವರ್ಷ ಅವರು ಪ್ರಸ್ತಾಪಿಸಿದ ಮತ್ತು ಅಂಗೀಕರಿಸಿದ ನಿರ್ದೇಶನಗಳನ್ನು ಅನುಸರಿಸುವ ಬದಲು ಅಂತಿಮ ಪರೀಕ್ಷೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಬೇಕು ಎಂದು ಕೋರಲಾಗಿದೆ.

12ನೇ ತರಗತಿಯ ಫಲಿತಾಂಶಗಳನ್ನು ನಿರ್ದಿಷ್ಟ ಸಮಯದೊಳಗೆ ಘೋಷಿಸಲು ವಸ್ತುನಿಷ್ಠ ವಿಧಾನವನ್ನು ರೂಪಿಸುವಂತೆ ಮನವಿ ಮಾಡಲಾಗಿದ್ದು, ಆನ್‌ಲೈನ್ ಅಥವಾ ಆಫ್‌ಲೈನ್ ಪರೀಕ್ಷೆಗಳು ಸಹ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರ್ಯಸಾಧ್ಯವಲ್ಲ ಎಂದು ಮಮತಾ ಶರ್ಮಾ ಹೇಳಿದ್ದಾರೆ.

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್‌ಸಿಇ) ಈ ಹಿಂದೆ ನೀಡಿದ ಅಧಿಸೂಚನೆಗಳನ್ನು ಬದಿಗಿರಿಸಿ, 12 ನೇ ತರಗತಿ ಫಲಿತಾಂಶ ಘೋಷಣೆಯ ವಿಳಂಬವು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅಡ್ಡಿಯಾಗುತ್ತದೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.

ನಡೆಯುತ್ತಿರುವ ಸಾಂಕ್ರಾಮಿಕದ ಮಧ್ಯೆ, ಮೇ 4 ರಿಂದ ಜೂನ್ 14 ರವರೆಗೆ ನಡೆಯಬೇಕಿದ್ದ 12 ನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಗಳನ್ನು ಮುಂದೂಡಲಾಗಿದೆ. 12 ನೇ ತರಗತಿ ಫಲಿತಾಂಶಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಆಧಾರವಾಗಿರುವುದರಿಂದ, ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿತ್ತು.

ಜೂನ್ 1 ರಂದು ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿ ಸಿಬಿಎಸ್‌ಇ ತಿಳಿಸಿದೆ.

ಪರೀಕ್ಷೆಗಳು ಪ್ರಾರಂಭವಾಗುವ ಮೊದಲು ಕನಿಷ್ಠ 15 ದಿನಗಳ ನೋಟಿಸ್ ನೀಡಲಾಗುವುದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

SCROLL FOR NEXT