ದೇಶ

ಕೋವಿಡ್ ಮೊದಲ ಅಲೆ ನಂತರ ಸರ್ಕಾರ, ಸಾರ್ವಜನಿಕರೆಲ್ಲರೂ ಸುರಕ್ಷತೆಯನ್ನು ಕಡೆಗಣಿಸಿದ್ದಾರೆ: ಮೋಹನ್ ಭಾಗವತ್

Raghavendra Adiga

ನವದೆಹಲಿ: ಕೋವಿಡ್ ಮೊದಲ ಅಲೆಯ ನಂತರ, ಸರ್ಕಾರ, ಆಡಳಿತ ಮತ್ತು ಸಾರ್ವಜನಿಕರು ತಮ್ಮ ಸುರಕ್ಷತೆಯನ್ನು ಮರೆತಿದ್ದಾರೆ ಇದು ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಹೇಳಿದರು.  ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜನರು ಸಕಾರಾತ್ಮಕ ಹಾಗೂ ಪೂರ್ವಸಿದ್ದತೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

'ಪಾಸಿಟಿವಿಟಿ ಅನ್ಲಿಮಿಟೆಡ್' ಎಂಬ ಉಪನ್ಯಾಸ ಸರಣಿಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಪರಸ್ಪರ ಬೆರಳು ತೋರಿಸುವ ಬದಲು ದೇಶವು ಒಗ್ಗಟ್ಟಿನಿಂದ ಇರಬೇಕು ಮತ್ತು ಈ ಪರೀಕ್ಷೆಯ ಸಮಯದಲ್ಲಿ ಒಂದಾಗಿ ಕೆಲಸ ಮಾಡಬೇಕು ಎಂದು ಹೇಳಿದರು. "ನಾವು ಈ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.ಏಕೆಂದರೆ ಅದು ಸರ್ಕಾರವಾಗಲಿ, ಆಡಳಿತವಾಗಲಿ, ಸಾರ್ವಜನಿಕವಾಗಲಿ, ವೈದ್ಯರ ಸೂಚನೆಯ ಹೊರತಾಗಿಯೂ ಎಲ್ಲರೂ ಮೊದಲ ಅಲೆಯ ಬಳಿಕ ತಮ್ಮ ತಮ್ಮ ಸುರಕ್ಷತೆಯನ್ನು ಕಡೆಗಣಿಸಿದ್ದಾರೆ."

"ಸದ್ಯ ಮೂರನೇ ಅಲೆ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ನಾವು ಹೆದರುವುದಿಲ್ಲ, ಬಂಡೆಯಂತೆ ನಿಲ್ಲುತ್ತೇವೆ."

"ನಾವು ಸಕಾರಾತ್ಮಕವಾಗಿ ಕೆಲಸ ಮಾಡಬೇಕು.ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮನ್ನು ಋಣಾತ್ಮಕ ಆಲೋಚನೆಗಳು ತಡೆಯದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು" ಎಂದು ಅವರು ಹೇಳಿದರು. ಯಾರೊಬ್ಬರತ್ತ  ಬೆರಳು ತೋರಿಸಲು ಇದು ಸೂಕ್ತ ಸಮಯವಲ್ಲ ಮತ್ತು ಎಲ್ಲರೂ ವ್ಯರ್ಥ ಟೀಕೆಯನ್ನು ಬಿಡಬೇಕು.

ಎರಡನೆಯ ಮಹಾಯುದ್ಧದಲ್ಲಿ ಇಂಗ್ಲೆಂಡ್‌ನ ಪರಿಸ್ಥಿತಿಯು ಪ್ರತಿಯೊಂದು ಸನ್ನಿವೇಶಲ್ಲಿಯೂ ವಿರುದ್ಧವಾಗಿ ಕಾಣಿಸುತ್ತಿದ್ದುದನ್ನು ಉದಾಹರಿಸಿದ ಭಾಗವತ್, ಆಗಿನ ಪ್ರಧಾನ ಮಂತ್ರಿ ವಿನ್‌ಸ್ಟನ್ ಚರ್ಚಿಲ್ ಅವರ ಟೇಬಲ್ ಮೇಲೆ ಒಂದು ಲೈನ್ ಬರೆಯಲಾಗಿದೆ. ಅದೆಂದರೆ, "ಈ ಕಚೇರಿಯಲ್ಲಿ ಯಾವುದೇ ನಿರಾಶಾವಾದವಿಲ್ಲ. ಸೋಲಿನ ಸಾಧ್ಯತೆಗಳ ಬಗ್ಗೆ ನಮಗೆ ಆಸಕ್ತಿ ಇಲ್ಲ. ಅವು ಅಸ್ತಿತ್ವದಲ್ಲಿಲ್ಲ". ಇದೇ ರೀತಿಯಲ್ಲಿ ಇಂದಿನ ಪರಿಸ್ಥಿತಿಯನ್ನು "ನಾವು ಧೈರ್ಯದಿಂದ ಎದುರಿಸಬೇಕು.. ನಾವು ಸಹ ದೃಢವಾಗಿ ಇದನ್ನು ದಾಟಬೇಕಾಗಿದೆ" ಎಂದು ಅವರು ಹೇಳಿದರು.

SCROLL FOR NEXT