ದೇಶ

ಮಧ್ಯಪ್ರದೇಶ: ಉಜ್ಜೈನ್ ಬಿಜೆಪಿ ಸಂಸದರ ಸಿಬ್ಬಂದಿ, ಕುಟುಂಬಸ್ಥರಿಗೆ ಮನೆಯಲ್ಲಿಯೇ ಲಸಿಕೆ; ತನಿಖೆಗೆ ಆದೇಶ

Lingaraj Badiger

ಉಜ್ಜೈನ್: ಮಧ್ಯ ಪ್ರದೇಶದ ಉಜ್ಜೈನ್ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಅವರ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರಿಗೆ ಮತ್ತು ಬೆಂಬಲಿಗರಿಗೆ ತಮ್ಮ ಮನೆಯಲ್ಲಿಯೇ ಸರ್ಕಾರಿ ವೈದ್ಯಕೀಯ ತಂಡ ಕೋವಿಡ್ ಲಸಿಕೆ ಹಾಕಿದ್ದು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. 

ವ್ಯಾಕ್ಸಿನೇಷನ್ ಗಾಗಿ ಯಾರೊಬ್ಬರು ಮನೆಗೆ ಸರ್ಕಾರಿ ತಂಡವನ್ನು ಕರೆಯಿಸಿಕೊಳ್ಳಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರೆ, ಫಿರೋಜಿಯಾ ಅವರು ಸರ್ಕಾರಿ ಯಂತ್ರೋಪಕರಣಗಳನ್ನು ದುರ್ಬಳಕೆ ಮಾಡಿಕೊಂಡಿದ್ದು, ಇದು "ನಾಚಿಕೆಗೇಡಿನ ಸಂಗತಿ" ಎಂದು ಕಾಂಗ್ರೆಸ್ ಹೇಳಿದೆ.

ಸಾಮಾನ್ಯ ನಾಗರಿಕರು ಲಸಿಕೆ ಪಡೆಯಲು ಪರದಾಡುತ್ತಿರುವಾಗ ಬಿಜೆಪಿ ಸಂಸದರು ತಮ್ಮ ಮನೆಯಲ್ಲಿಯೇ ಲಿಸಿಕೆ ಹಾಕಿಸಿಕೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಕಪಿಲ್ ಕಟಾರಿಯಾ ಅವರು ಶುಕ್ರವಾರ ಲಸಿಕೆ ಪಡೆಯುವ ಚಿತ್ರವನ್ನು ಪೋಸ್ಟ್ ಮಾಡಿ, ಫಿರೋಜಿಯಾ ಅವರಿಗೆ ಧನ್ಯವಾದ ಅರ್ಪಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಹಲವಾರು ಸಾಮಾಜಿಕ ಮಾಧ್ಯಮಗಳಲ್ಲೂ ರಾಜಕಾರಣಿಯ ನಿವಾಸದಲ್ಲಿ ನಡೆಸಿದ ವ್ಯಾಕ್ಸಿನೇಷನ್ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಕ್ರಮವನ್ನು ಟೀಕಿಸಿದ್ದಾರೆ. ಆದರೆ, ತಮ್ಮ ಪಕ್ಷದ ಕಾರ್ಯಕರ್ತರೊಬ್ಬರು ತಮ್ಮ ಗಮನಕ್ಕೆ ತರದೆ ವೈದ್ಯಕೀಯ ತಂಡವನ್ನು ತಮ್ಮ ನಿವಾಸಕ್ಕೆ ಕರೆದಿದ್ದಾರೆ ಎಂದು ಫಿರೋಜಿಯಾ ಸಮರ್ಥಿಸಿಕೊಂಡಿದ್ದಾರೆ.

ಮಾಹಿತಿ ಪಡೆದ ನಂತರ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಉಜ್ಜಯಿನಿ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಹೇಳಿದ್ದಾರೆ.

"ವೈದ್ಯಕೀಯ ತಂಡವನ್ನು ಸಂಸದರ ಮನೆಗೆ ಕಳುಹಿಸಲು ಯಾರು ಅನುಮತಿ ನೀಡಿದರು ಎಂಬ ಬಗ್ಗೆ ಮಾಹಿತಿ ನೀಡುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೊಬ್ಬರ ಮನೆಗೆ ವೈದ್ಯಕೀಯ ತಂಡ ಕಳುಹಿಸುವ ಅವಕಾಶವಿಲ್ಲ" ಎಂದು ಆಶಿಶ್ ಸಿಂಗ್ ತಿಳಿಸಿದ್ದಾರೆ.

SCROLL FOR NEXT