ದೇಶ

ಮಲೇರ್ಕೋಟ್ಲಾ ವಿಷಯವಾಗಿ ಉತ್ತರ ಪ್ರದೇಶ-ಪಂಜಾಬ್ ಸಿಎಂಗಳ ನಡುವೆ ವಾಗ್ಯುದ್ಧ 

Srinivas Rao BV

ಚಂಡೀಗಢ: ಪಂಜಾಬ್ ಹಾಗೂ ಉತ್ತರ ಪ್ರದೇಶಗಳ ವಿಧಾನಸಭಾ ಚುನಾವಣೆಗಳಿಗೆ ಇನ್ನು 9 ತಿಂಗಳಷ್ಟೇ ಬಾಕಿ ಇದ್ದು, ಪಂಜಾಬ್ ನಲ್ಲಿ ಹೊಸ ಜಿಲ್ಲೆ ಸೃಷ್ಟಿಯ ಸಂಬಂಧ ಇಬ್ಬರೂ ಮುಖ್ಯಮಂತ್ರಿಗಳ ನಡುವೆ ವಾಗ್ಯುದ್ಧ ನಡೆದಿದೆ. 

ಈದ್ ದಿನದಂದು ಪಂಜಾಬ್ ಮುಖ್ಯಮಂತ್ರಿ, ರಾಜ್ಯದಲ್ಲಿ ಮುಸ್ಲಿಂ ಬಾಹುಳ್ಯ ಹೆಚ್ಚಿರುವ ಮಲೇರ್ಕೋಟ್ಲಾ ಪ್ರದೇಶವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸೈದ್ಧಾಂತಿಕ ಅಥವಾ ಧಾರ್ಮಿಕ ಆಧಾರದಲ್ಲಿ ತಾರತಮ್ಯ ಮಾಡುವುದು ಸಂವಿಧಾನದ ಮೂಲಭೂತ ಚೈತನ್ಯಕ್ಕೆ ವಿರುದ್ಧವಾದುದ್ದಾಗಿದ್ದು, ಮಲೇರ್ಕೋಟ್ಲಾವನ್ನು ಹೊಸ ಜಿಲ್ಲೆಯನ್ನಾಗಿ ಘೋಷಣೆ ಮಾಡಿರುವುದು ಇಂಥಹದ್ದೇ ತಾರತಮ್ಯಕ್ಕೆ ಹಿಡಿದ ಕೈಗನ್ನಡಿ  ಎಂದು ಹೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮರಿಂದರ್ ಸಿಂಗ್, " ಯೋಗಿ ಆದತ್ಯನಾಥ್ ಪಂಜಾಬ್ ನಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಪಂಜಾಬ್ ನ ಗುಣಲಕ್ಷಣಗಳ ಬಗ್ಗೆ ಯೋಗಿ ಆದತ್ಯನಾಥ್ ಅವರಿಗೇನು ಗೊತ್ತು? ಅಥವಾ ಮಲೇರ್ಕೋಟ್ಲಾದ ಬಗ್ಗೆ ಆದಿತ್ಯನಾಥ್ ಏನು ಬಲ್ಲರು?  ಎಂದು ಅಮರಿಂದರ್ ಸಿಂಗ್ ಪ್ರಶ್ನಿಸಿದ್ದಾರೆ. 

ಬಿಜೆಪಿಯ ಕೋಮು ವಿಭಜಕ ರಾಜಕಾರಣ ಇಡೀ ಪ್ರಪಂಚಕ್ಕೇ ತಿಳಿದಿದೆ. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಕೋಮು ವಿಭಜಕ ರಾಜಕಾರಣ ತಿಳಿದಿದೆ ಎಂದು ಅಮರಿಂದರ್ ಸಿಂಗ್ ತಿರುಗೇಟು ನೀಡಿದ್ದಾರೆ. 

SCROLL FOR NEXT