ದೇಶ

'ನಾರದ ಸ್ಟಿಂಗ್ ಆಪರೇಷನ್' ಕೇಸು: ಚಾರ್ಜ್ ಶೀಟ್ ಸಲ್ಲಿಕೆಗೆ ಸಿಬಿಐ ತಯಾರು, ಟಿಎಂಸಿ ಬೆಂಬಲಿಗರ ಭಾರೀ ಪ್ರತಿಭಟನೆ

Sumana Upadhyaya

ನವದೆಹಲಿ: ಸೋಮವಾರ ಬೆಳಗ್ಗೆ ಬಂಧಿತರಾಗಿರುವ ಮೂವರು ಟಿಎಂಸಿ ನಾಯಕರು ಸೇರಿದಂತೆ 5 ಮಂದಿ ವಿರುದ್ಧ ನಾರದ ರಹಸ್ಯ ಕಾರ್ಯಾಚರಣೆ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಲಿದೆ. ರಾಜಕಾರಣಿಗಳು ಲಂಚ ತೆಗೆದುಕೊಳ್ಳುವುದು ಕ್ಯಾಮರಾದಲ್ಲಿ ಸೆರೆಯಾದ ಪ್ರಕರಣ ಇದಾಗಿದ್ದು, ಪಶ್ಚಿಮ ಬಂಗಾಳ ಸರ್ಕಾರದಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಈಗಾಗಲೇ ಸಿಬಿಐ ತೃಣಮೂಲ ಕಾಂಗ್ರೆಸ್ ನಾಯಕರಾದ ಫಿರಾದ್ ಹಕಿಮ್, ಸುಬ್ರತ ಮುಖರ್ಜಿ ಮತ್ತು ಮದನ್ ಮಿತ್ರಾ ಹಾಗೂ ಪಕ್ಷದ ಮಾಜಿ ನಾಯಕ ಸೊವನ್ ಚಟರ್ಜಿ ಅವರನ್ನು ಕೋಲ್ಕತ್ತಾದಲ್ಲಿ ಇಂದು ಬೆಳಗ್ಗೆ ಬಂಧಿಸಿದೆ.

ಏನಿದು ಪ್ರಕರಣ: ಕಂಪೆನಿಯೊಂದಕ್ಕೆ ಸಹಾಯವಾಗುವಂತೆ ಕೆಲಸ ಮಾಡಿಕೊಡಲು ಅದರ ಪ್ರತಿನಿಧಿಗಳಿಂದ 2014ರಲ್ಲಿ ಲಂಚ ಸ್ವೀಕರಿಸುವ ದೃಶ್ಯ ನಾರದ ಟಿವಿ ನ್ಯೂಸ್ ಚಾನೆಲ್ ನಲ್ಲಿ ಸೆರೆಯಾಗಿತ್ತು. ಸುದ್ದಿ ವಾಹಿನಿಯ ಮ್ಯಾಥ್ಯು ಸ್ಯಾಮುವೆಲ್ ಈ ರಹಸ್ಯ ಕಾರ್ಯಾಚರಣೆ ನಡೆಸಿದ್ದರು. ದೃಶ್ಯದಲ್ಲಿ ಸೆರೆಯಾದ ವ್ಯಕ್ತಿಗಳು ಟಿಎಂಸಿ ಸಚಿವರು, ಸಂಸದರು, ಶಾಸಕರು ಎಂದು ಹೇಳಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುತ್ತಿದ್ದ ಸಿಬಿಐ ಇಂದು ಮೂವರು ಟಿಎಂಸಿ ನಾಯಕರನ್ನು ಬಂಧಿಸಿದೆ.

2014ರಲ್ಲಿ ನಡೆಸಲಾದ ರಹಸ್ಯ ಕಾರ್ಯಾಚರಣೆಯ ವಿಡಿಯೊ ಹೊರಬಂದು ಸುದ್ದಿಯಾಗಿದ್ದು 2016ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮೊದಲು. ನಾರದ ಸ್ಟಿಂಗ್ ಆಪರೇಷನ್ ಎಂದು ದೇಶವ್ಯಾಪಿ ಸುದ್ದಿಯಾಗಿತ್ತು. 2017ರ ಮಾರ್ಚ್ ತಿಂಗಳಲ್ಲಿ ಕೋಲ್ಕತ್ತಾ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶ ನೀಡಿತ್ತು.

ಸಿಬಿಐ ಕಚೇರಿ ಮುಂದೆ ಭಾರೀ ಪ್ರತಿಭಟನೆ: ಟಿಎಂಸಿಯ ನಾಯಕರನ್ನು ಬಂಧಿಸುತ್ತಿದ್ದಂತೆ ಟಿಎಂಸಿ ಬೆಂಬಲಿಗರು, ಕಾರ್ಯಕರ್ತರು ಕೋಲ್ಕತ್ತಾದ ಸಿಬಿಐ ಕಚೇರಿ ಮುಂದೆ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.ಅವರನ್ನು ಕೊರೋನಾ ಸೋಂಕಿನ ನಡುವೆ ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸವಾಗಿದೆ.

SCROLL FOR NEXT