ದೇಶ

ಡಿಆರ್ ಡಿಒ ಅಭಿವೃದ್ಧಿಪಡಿಸಿರುವ 2ಡಯಾಕ್ಸಿ-ಡಿ-ಗ್ಲೂಕೋಸ್ ಔಷಧಿ ಬಿಡುಗಡೆ: ಕೊರೋನಾ ವಿರುದ್ಧ ಪರಿಣಾಮಕಾರಿ ಎಂದ ಕೇಂದ್ರ ಸಚಿವರು

Sumana Upadhyaya

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಅಭಿವೃದ್ಧಿಪಡಿಸಿರುವ ಕೋವಿಡ್ ವಿರುದ್ಧ ರೋಗಿಗಳಿಗೆ ನೀಡುವ ಔಷಧಿ 2ಡಯಾಕ್ಸಿ-ಡಿ-ಗ್ಲೂಕೋಸ್ ನ್ನು ಸೋಮವಾರ ದೆಹಲಿಯಲ್ಲಿ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಡುಗಡೆ ಮಾಡಿದರು.

ಡಿಆರ್ ಡಿಒ ಅವರ ನೆರವಿನಿಂದ, ರಕ್ಷಣಾ ಸಚಿವರ ಸಹಕಾರದಿಂದ ಮೊದಲ ದೇಶೀಯ ಸಂಸೋಧನಾ ಆಧಾರಿತ ಔಷಧಿಯನ್ನು ಕೋವಿಡ್ ವಿರುದ್ಧ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್ ಸೋಂಕಿನಿಂದ ಶೀಘ್ರ ಗುಣಮುಖ ಹೊಂದಲು ಮತ್ತು ಆಕ್ಸಿಜನ್ ಮೇಲೆ ಹೆಚ್ಚು ಅವಲಂಬನೆಯನ್ನು ಈ ಔಷಧಿ ಕಡಿಮೆ ಮಾಡಲಿದೆ ಎಂದು ಆರೋಗ್ಯ ಸಚಿವ ಡಾ ಹರ್ಷವರ್ಧನ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೋವಿಡ್ ಎರಡನೇ ಅಲೆ ಎದ್ದ ನಂತರ ನಾವು ಸಂಕಷ್ಟದಲ್ಲಿದ್ದೇವೆ,ಕಳೆದೊಂದು ವರ್ಷದಿಂದ ಸಾಕಾಗಿ ಹೋಗಿದೆ. ಆದರೂ ನಮ್ಮ ಹೋರಾಟ ಮುಂದುವರಿಯಲಿದೆ, ಕೋವಿಡ್ ವಿರುದ್ಧ ಹೋರಾಡಿ ಖಂಡಿತಾ ಗೆದ್ದು ಬರುತ್ತೇವೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಆಕ್ಸಿಜನ್ ಉತ್ಪಾದನೆಯನ್ನು ಸಾಮೂಹಿಕ ಪ್ರಯತ್ನ ಮೂಲಕ ಬಗೆಹರಿಸಲಾಗುತ್ತಿದೆ. ಈಗ ಔಷಧಿಯ ಕೊರತೆ ಕೂಡ ಅಷ್ಟೊಂದು ಇಲ್ಲ ಎಂದು ಹೇಳಿದರು.

ಡಿಆರ್ ಡಿಒ ಅಭಿವೃದ್ಧಿಪಡಿಸಿರುವ 2ಡಯಾಕ್ಸಿ-ಡಿ-ಗ್ಲೂಕೋಸ್ ಔಷಧಿ ಕೋವಿಡ್ ವಿರುದ್ಧ ಸೆಣಸಾಡಲು ಬಹಳ ಉಪಕಾರಿಯಾಗಲಿದ್ದು ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಚಿಕಿತ್ಸೆಗೆ ಮತ್ತು ರೋಗಿಗಳು ಹೆಚ್ಚು ಆಕ್ಸಿಜನ್ ಮೇಲೆ ಅವಲಂಬಿತವಾಗುವುದನ್ನು ಇದು ತಪ್ಪಿಸಬಹುದು. ಪಿಎಂ-ಕೇರ್ಸ್ ಫಂಡ್ ನಡಿ 322.5 ಕೋಟಿ ರೂಪಾಯಿ ವೆಚ್ಚದಲ್ಲಿ 1.5 ಲಕ್ಷ ಘಟಕಗಳನ್ನು ಸಂಗ್ರಹಿಸಲಾಗುತ್ತದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿರುವ 2ಡಯಾಕ್ಸಿ-ಡಿ-ಗ್ಲೂಕೋಸ್ ಔಷಧ ತೆಗೆದುಕೊಂಡರೆ ಸೋಂಕಿತರ ಆಕ್ಸಿಜನ್ ಬಳಕೆ ಪ್ರಮಾಣ ತಗ್ಗಲಿದೆ ಎಂದು ಡಿಆರ್‌ಡಿಒ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಸದ್ಯದಲ್ಲೇ ರಾಜ್ಯದಲ್ಲೂ ಇದನ್ನು ಪರಿಚಯಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ. ಸುಧಾಕರ್ ಈ ಹಿಂದೆ ಹೇಳಿದ್ದರು.

SCROLL FOR NEXT