ದೇಶ

ನಾರದ ಪ್ರಕರಣ: ಸುವೇಂದು ಅಧಿಕಾರಿ, ಇತರ 3 ಸಂಸದರ ವಿರುದ್ಧ ಕ್ರಮಕ್ಕಾಗಿ ಸ್ಪೀಕರ್ ಅನುಮತಿಗಾಗಿ ಕಾಯುತ್ತಿದೆ ಸಿಬಿಐ

Lingaraj Badiger

ಕೋಲ್ಕತಾ: ನಾರದ ಕುಟುಕು ಕಾರ್ಯಾಚರಣೆ ಪ್ರಕರಣದ ಆರೋಪಿ, ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ನಾಲ್ವರು ರಾಜಕೀಯ ಮುಖಂಡರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ, ಲೋಕಸಭಾ ಸ್ಪೀಕರ್ ಅನುಮತಿಗಾಗಿ ಕಾಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಬಿಜೆಪಿಯ ಸುವೇಂದು ಅಧಿಕಾರಿ ನಾರದ ಪ್ರಕರಣ ನಡೆದಾ ಟಿಎಂಸಿ ಸಂಸದರಾಗಿದ್ದರು. ಈಗ ಬಿಜೆಪಿಯಲ್ಲಿದ್ದು, ಪ್ರತಿಪಕ್ಷ ನಾಯಕರಾಗಿದ್ದಾರೆ.

ಸ್ಟಿಂಗ್ ಕಾರ್ಯಾಚರಣೆಯ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಸೋಮವಾರ ಇಬ್ಬರು ರಾಜ್ಯ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಹಾಗೂ ಶಾಸಕ ಮದನ್ ಮಿತ್ರ ಮತ್ತು ಪಕ್ಷದ ಮಾಜಿ ಮುಖಂಡ ಸೋಮನ್ ಚಟರ್ಜಿ ಅವರನ್ನು ಬಂಧಿಸಿತ್ತು.

 ನಾಲ್ಕು ಟಿಎಂಸಿ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ಜಗದೀಪ್ ಧಂಕರ್ ಅವರು ಇತ್ತೀಚೆಗೆ ಅನುಮತಿ ನೀಡಿದ್ದರು, ಅದರ ನಂತರ ಸಿಬಿಐ, ಚಾರ್ಜ್‌ಶೀಟ್ ಅಂತಿಮಗೊಳಿಸಿ ಅವರನ್ನು ಬಂಧಿಸಿದೆ.

ಕಾರ್ಯಾಚರಣೆ ನಡೆಸಿದಾಗ ಟಿಎಂಸಿ ಸಂಸದರಾಗಿದ್ದ ಸುವೆಂದು ಅಧಿಕಾರಿ, ಸೌಗತಾ ರಾಯ್, ಪ್ರಸೂನ್ ಬ್ಯಾನರ್ಜಿ ಮತ್ತು ಕಾಕಲಿ ಘೋಷ್ ದಸ್ತಿದಾರ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಲೋಕಸಭಾ ಸ್ಪೀಕರ್ ಅನುಮತಿ ಕೋರಿದೆ ಎಂದು ಅಧಿಕಾರಿ ವಿವರಿಸಿದರು.

ಸಿಬಿಐನಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

SCROLL FOR NEXT