ದೇಶ

ಕೊರೋನಾ ಸಾವಿನ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸ: ಬಿಹಾರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Vishwanath S

ಪಾಟ್ನಾ: ಬಕ್ಸಾರ್ ಜಿಲ್ಲೆಯಲ್ಲಿನ ಗಂಗಾ ತೀರಕ್ಕೆ ಹತ್ತಾರು ಶವಗಳು ತೇಲಿ ಬಂದಿದ್ದ ಪ್ರಕರಣ ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಇದರ ಬೆನ್ನಲ್ಲೇ ಬಿಹಾರ ಸರ್ಕಾರದ ಸಂಸ್ಥೆಗಳು ಪ್ರಕಟಿಸಿದ ಕೊರೋನಾ ಸಾವುಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ ಎಂದು ಹೈಕೋರ್ಟ್ ಚಾಟಿ ಬೀಸಿದೆ. 

ಇನ್ನು ರಾಜ್ಯದ ಮುಖ್ಯಕಾರ್ಯದರ್ಶಿ ತ್ರಿಪುರಾರಿ ಶರಣ್ ಮತ್ತು ಪಾಟ್ನಾ ವಿಭಾಗೀಯ ಆಯುಕ್ತರು ಕೊರೋನಾ ಸಾವುಗಳ ಬಗ್ಗೆ ಸಲ್ಲಿಸಿದ್ದ ಅಫಿಡವಿಟ್ ಅನ್ನು ಹರಿದು ಹಾಕಿದ ನ್ಯಾಯಾಧೀಶರು ಬಿಹಾರದ ಸರ್ಕಾರದ ಪ್ರಧಾನ ಆರೋಗ್ಯ ಕಾರ್ಯದರ್ಶಿಗೆ ಈ ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಎರಡು ದಿನಗಳಲ್ಲಿ ಹೊಸ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. 

ರಾಜ್ಯದ ಮುಖ್ಯಕಾರ್ಯದರ್ಶಿ ತ್ರಿಪುರಾರಿ ಶರಣ್ ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ್ ಮಾರ್ಚ್ 1ರಿಂದ ಬಕ್ಸಾರ್ ನಲ್ಲಿ ಕೇವಲ ಎಂಟು ಸಾವುಗಳು ಸಂಭವಿಸಿದೆ. ಆದರೆ ಮೇ 5 ಮತ್ತು ಮೇ 14ರ ನಡುವೆ ಬಕ್ಸಾರ್ ನ ಚಾರ್ಧಾಮ್ ಘಾಟ್ ನಲ್ಲಿ 789 ಶವಗಳು ಸಂಸ್ಕಾರ ನಡೆದಿದೆ ಎಂದು ವಿಭಾಗೀಯ ಆಯುಕ್ತರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಬಕ್ಸಾರ್ ನಲ್ಲಿ ಕಳೆದ ವಾರ 70ಕ್ಕಿಂತಲೂ ಹೆಚ್ಚು ಮೃತದೇಹಗಳು ನದಿಯಲ್ಲಿ ತೇಲಿ ಬಂದಿತ್ತು. ಈ ಪ್ರಕರಣ ಸ್ಥಳೀಯರಲ್ಲಿ ಆತಂಕಕ್ಕೀಡು ಮಾಡಿತ್ತು. ಇವೆಲ್ಲಾ ಕೋವಿಡ್ ಮೃತದೇಹಗಳಾಗಿದ್ದರೆ ನಮಗೂ ಹರಡಬಹುದು ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು. 

SCROLL FOR NEXT